ರಾಷ್ಟ್ರದ ಭದ್ರ ಬುನಾದಿಗೆ ಮತದಾನ ಮಾಡಿ: ಮಹಾರುದ್ರ ಡಾಕುಳಗಿ

ಬೀದರ: ಮಾ.17:ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಮತದಾನವನ್ನು ನಮ್ಮ ಪವಿತ್ರ ಕರ್ತವ್ಯವೆಂದು ಭಾವಿಸಬೇಕೆಂದು ಬ್ರಿಮ್ಸ್ ನಿರ್ದೇಶಕ ಶಿವಕುಮಾರ ಶೆಟಕಾರ ತಿಳಿಸಿದರು.
ನಗರದ ಬ್ರಿಮ್ಸ್ ಕಾಲೇಜು ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೀದರ ಹಾಗೂ ಮತದಾರರ ಜಾಗೃತಿ ಸಂಘದ ವತಿಯಿಂದ ಆಯೋಜಿಸಿದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ ಮಹಾರುದ್ರ ಡಾಕುಳಗಿ ಮಾತನಾಡುತ್ತ ಮತದಾನ ಪ್ರಜಾಪ್ರಭುತ್ವದ ಒಂದು ಹಬ್ಬ. ಅದನ್ನು ಸಂಭ್ರಮದಿಂದ ಆಚರಿಸಬೇಕೇ ವಿನಃ ಮತದಾನ ಮಾಡದೆ ಅಂದು ಪ್ರವಾಸಕ್ಕೆಂದು ಎಲ್ಲಿಯೂ ಹೋಗಕೂಡದು. ಒಂದು ವೇಳೆ ಮತದಾನ ಮಾಡದಿದ್ದರೆ ಮನುಷ್ಯತ್ವವೇ ಕಳೆದುಕೊಂಡಂತೆ. ಬದುಕಿದ್ದೂ ಸತ್ತಂತೆ. ಆದ್ದರಿಂದ ಮತವನ್ನು ಮಾರಿಕೊಳ್ಳದೆ ಅದನ್ನು ತಪ್ಪದೇ ದಾನ ಮಾಡಬೇಕೆಂದು ಸಲಹೆ ನೀಡಿದರು. ಕೊನೆಯಲ್ಲಿ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ಸಮುದಾಯ ವೈದ್ಯ ಶಾಸ್ತ್ರದ ಮುಖ್ಯಸ್ಥರಾದ ಡಾ. ಪಲ್ಲವಿ ಕೇಸರಿ ಮಾತನಾಡಿ ಮತದಾನ ಎಂಬುದು ನಮಗೆ ಸಿಕ್ಕ ಪವಿತ್ರವಾದ ಹಕ್ಕು. ಅದನ್ನು ಉತ್ತಮ ಅಭ್ಯರ್ಥಿಗೆ ಚಲಾಯಿಸಿ ರಾಷ್ಟ್ರದ ಭದ್ರ ಬುನಾದಿಗೆ ನಾಂದಿ ಹಾಡಬೇಕು. ಪ್ರತಿಯೊಬ್ಬರೂ 18 ವರ್ಷ ಮೇಲ್ಪಟ್ಟವರಾಗಿದ್ದರೆ ತಪ್ಪದೇ ಮತದಾರರ ಗುರುತಿನ ಚೀಟಿ ಪಡೆಯಬೇಕು. ಒಂದೊಂದು ಮತವೂ ಅಮೂಲ್ಯವಾದುದು. ವಿಚಾರಿಸಿ ದೇಶದ ಅಭಿವೃದ್ಧಿಗಾಗಿ ಮತ ನೀಡಬೇಕೆಂದು ಸಲಹೆ ನೀಡಿದರು.
ಇದೇ ವೇಳೆ ವೇದಿಕೆ ಮೇಲೆ ಡಾ. ಧನಂಜಯ ನಾಯಕ, ಬ್ರಿಮ್ಸ್ ಕನ್ನಡ ಸಂಘದ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ, ಡಾ. ದಿಲೀಪ ರಾಠೋಡ್, ಡಾ. ಅಶೋಕ ಶೆಳಕೆ, ಪೆÇ್ರ. ಶಶಿಕಾಂತ ಹೊಸದೊಡ್ಡೆ, ಸೇರಿದಂತೆ ಸುಮಾರು 500ಕ್ಕೂ ಅಧಿಕ ಮೆಡಿಕಲ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.