ರಾಷ್ಟ್ರದ ಬೆಳವಣಿಗೆಗೆ ಅನಿವಾಸಿ ಭಾರತೀಯರ ಕೊಡುಗೆ ಹೆಚ್ಚಾಗಲಿ

ಕಲಬುರಗಿ,ಜ.9: ನಮ್ಮ ದೇಶದಲ್ಲಿನ ಎಲ್ಲಾ ಸೌಕರ್ಯಗಳನ್ನು ಪಡೆದು ಶಿಕ್ಷಣವಂತರಾಗಿ ವಿದೇಶಗಳಲ್ಲಿ ಅನಿವಾಸಿ ಭಾರತೀಯರು ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ದೇಶಗಳ ಪ್ರತಿಷ್ಠಿತ ಸಂಸ್ಥೆಗಳು ಮತ್ತು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರ ಜೊತೆಗೆ ದೇಶಕ್ಕೆ ಅನಿವಾರ್ಯ ಸಂದರ್ಭ ಬಂದಾಗ ದೇಶಕ್ಕೆ ಉದಾರವಾದ ಸಹಾಯಹಸ್ತ ಚಾಚುವ ಪ್ರಮಾಣದಲ್ಲಿ ಹೆಚ್ಚಳವಾಗುವುದರ ಮೂಲಕ ಕೊಡುಗೆ ನೀಡಬೇಕಾಗಿದೆ ಎಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಮುತ್ತಾ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ‘ಅನಿವಾಸಿ ಭಾರತೀಯರ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರು 9ನೇ ಜನವರಿ,1915 ರಂದು ದಕ್ಷಿಣ ಆಫ್ರಿಕಾದಿಂದ ಮರಳಿ ಭಾರತಕ್ಕೆ ಆಗಮಿಸಿದ್ ದಿನವನ್ನು ‘ಪ್ರವಾಸಿ ಭಾರತೀಯ ದಿನಾಚರಣೆ’ ಅಥವಾ ‘ಅನಿವಾಸಿ ಭಾರತೀಯರ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ. ಭಾರತ ಮತ್ತು ಜಾಗತಿಕ ಭಾರತೀಯ ಸಮುದಾಯದ ನಡುವಿನ ಸಂಬಂಧಗಳನ್ನು ಬಲಪಡಿಸಲು ದಿನಾಚರಣೆ ಪೂರಕವಾಗಿದೆ. ಭಾರತೀಯರ ಕೊಡುಗೆ ಮತ್ತು ಸಾಧನೆಗಳನ್ನು ಗುರ್ತಿಸಲು, ಪ್ರೋತ್ಸಾಹಿಸುವ ಉದ್ದೇಶ ದಿನಾಚರಣೆಯ ಹಿನ್ನಲೆಯಾಗಿದೆ. ವಿದ್ಯಾರ್ಥಿಗಳು ಮುಂದೆ ನೀವು ‘ಪ್ರತಿಭಾ ಪಲಾಯನ’ ಮಾಡಬೇಡಿ. ದೇಶದಲ್ಲಿ ಸೇವೆ ಸಲ್ಲಿಸುವುದು ಅಗತ್ಯ. ಒಂದು ವೇಳೆ ವಿದೇಶಗಳಲ್ಲಿ ಸೇವೆ ಸಲ್ಲಿಸಬೇಕಾದ ಸಂದರ್ಭ ಬಂದಾಗ ದೇಶ ಮರೆಯಬೇಡಿ ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮುತ್ತಾ, ಕ.ರಾ.ಪ್ರಾ.ಶಾ.ಶಿ.ಸಂಘದ ಆಳಂದ ತಾಲೂಕಾ ಘಟಕದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಚಂದ್ರಶೇಖರ ವೈ.ಶಿಲ್ಪಿ, ಪ್ರಿಯಾಂಕಾ ವಾಲಿ, ಲಕ್ಷ್ಮೀ, ಕಾಶಿಬಾಯಿ, ಪ್ರಮೋದ ಕುಲಕರ್ಣಿ, ಭೀಮಾಶಂಕರ, ಪ್ರಮುಖರಾದ ಪ್ರವೀಣ ಬಡಿಗೇರ್, ಅಭಿಜೀತ ವಿಶ್ವಕರ್ಮ, ರಕ್ಷಿತ್, ಪ್ರಥಮ್, ಆದಿತ್ಯ, ಶೃದ್ಧಾ, ಸಮೃದ್ಧಿ, ಪ್ರತೀಜ್ಞಾ, ಶೃಜನ್, ಆದಿತ್ಯ, ಶ್ರೇಯಸ್, ರಿಹಾನ್, ವರುಣ, ವಿಶಾಲ್ ಸೇರಿದಂತೆ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.