ರಾಷ್ಟ್ರದ ಏಕತೆ, ಸಮಗ್ರತೆ ಕಾಪಾಡಲು ಕರೆ

ಮಧುಗಿರಿ, ನ. ೨೨- ರಾಷ್ಟ್ರದ ಏಕತೆ, ಸಮಗ್ರತೆಯನ್ನು ಕಾಪಾಡಿ ಗೌರವಿಸುವುದು ದೇಶದಲ್ಲಿನ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ ಎಂದು ೪ನೇ ಜಿಲ್ಲಾ ಅಧಿಕ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಾಗರ ಗುರುಗೌಡ ಪಾಟೀಲ್ ತಿಳಿಸಿದರು.
ಪಟ್ಟಣದ ಪುರಸಭೆಯ ಆವರಣದಲ್ಲಿ ತಾಲ್ಲೂಕು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೋಮದಳ್ಳುರಿ, ದ್ವೇಷವನ್ನು ಭಿತ್ತರಿಸುವ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಅವುಗಳನ್ನು ಏಕತೆಯ ಮತ್ತು ಸಮಗ್ರತೆಯ ಮೂಲಕ ಪ್ರತಿಯೊಬ್ಬರು ಹಿಮ್ಮೆಟ್ಟಿಸಬೇಕಾಗಿದೆ ಎಂದರು.
ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ೧೫ ಅಂಶಗಳನ್ನು ಜಾರಿಗೆ ತಂದಿದ್ದು ಎಲ್ಲಾ ಅಲ್ಪಸಂಖ್ಯಾತರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ. ವಿಶೇಷವಾಗಿ ಅಲ್ಪಸಂಖ್ಯಾತರು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ್ದಾರೆ. ಅದರಲ್ಲೂ ಮುಸ್ಲಿಂ ಸಮುದಾಯದವರು ಶೈಕ್ಷಣಿಕವಾಗಿ ಬಹಳವಾಗಿ ಹಿಂದುಳಿದ್ದು ದೇಶದ ಅಭಿವೃದ್ದಿಗಾಗಿ ಸಮಾಜದ ಜೊತೆ ಜೊತೆಯಲ್ಲಿ ಸಾಗಬೇಕಾಗಿದೆ. ಹಿಂದೂ ಮುಸ್ಲಿಂ, ಕ್ರೈಸ್ತ, ಪಾರ್ಸಿ, ಜೈನ ಹಾಗೂ ದೇಶದಲ್ಲಿನ ಯಾವುದೇ ಧರ್ಮಗಳಲ್ಲಿ ಅಹಿಂಸೆಯನ್ನು ಬೋಧಿಸುವುದಿಲ್ಲ. ಮುಸ್ಲಿಂರು ಯಾವುದೇ ರಾಜಕೀಯ ಒತ್ತಡ ಹಾಗೂ ಪಟ್ಟಾಭದ್ರ ಹಿತಾಸಕ್ತಿಗಳಿಗೆ ಸಿಲುಕದೆ ಕೋಮುದಳ್ಳುರಿಯಂತಹ ಪ್ರಚೋದನೆಗಳಿಗೆ ಒಳಗಾಗದೆ ದೇಶದ ಅಭಿವೃದ್ಧಿಗೆ ಪಾಲುದಾರರಾಗಬೇಕು ಎಂದರು.
ಪಿಎಸ್‌ಐ ಕಾಂತರಾಜು ಮಾತನಾಡಿ, ಬೇರೆಯವರ ಭಾವನೆಗಳಿಗೆ ನಾವು ಸ್ಪಂದಿಸಿ ಅವರ ಜತೆಯಲ್ಲಿ ಐಕ್ಯರಾದಾಗ ಮಾತ್ರ ಐಕ್ಯತೆಗೆ ಅರ್ಥ ಬರುತ್ತದೆ. ಸಮಾಜದಲ್ಲಿ ಎಲ್ಲರಿಗೂ ಸಮಾನವಾಗಿ ಬದುಕುವ ಮತ್ತು ಜೀವಿಸುವ ಅವಕಾಶವಿದೆ. ಈಗಾಗಲೇ ಸರ್ಕಾರ ಅಲ್ಪಸಂಖ್ಯಾತರಿಗಾಗಿ ಶೇ. ೧೫ರಷ್ಟು ಮೀಸಲಾತಿಯನ್ನು ನೀಡಿದ್ದು ಅದರ ಸದುಪಯೋಗಪಡಿಸಿಕೊಳ್ಳಬೇಕು. ಶಾಂತಿಯುತ ಹಾಗೂ ನೆಮ್ಮದಿಯ ಸ್ವಾಸ್ಥ್ಯ ಸಮಾಜಕ್ಕೆ ಪ್ರತಿಯೊಬ್ಬರು ಆದ್ಯತೆ ನೀಡಬೇಕೆಂದರು.
ಈ ಸಂದರ್ಭದಲ್ಲಿ ಸಿಪಿಐ ಸರ್ದಾರ್, ಪುರಸಭೆಯ ಮುಖ್ಯಾಧಿಕಾರಿ ಅಮರನಾರಾಯಣ, ವಕೀಲ ಆರ್.ಆನಂದ್, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಮರಳುಸಿದ್ದೇಶ್ವರ, ಚಿಕ್ಕರಂಗಪ್ಪ, ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ಜಯರಾಮ್, ಬಿ.ಆರ್.ಸಿ. ಆನಂದ್, ಮುಸ್ಲಿಂ ಮುಖಂಡರಾದ ಮೊಹಮದ್ ಸಾಧಿಕ್, ಹರ್ಷದ್ ಹುಸೇನ್, ಬಾಬ ಪ್ರೆಸ್‌ನ ಸೈಯದ್, ಆಲೀಂ, ಆಫೀಜ್ ಮೌಲಾನ ಷರೀಪ್ ಮತ್ತಿತರರು ಮತ್ತಿತರರು ಉಪಸ್ಥಿತರಿದ್ದರು.