ರಾಷ್ಟ್ರದ ಆರ್ಥಿಕ ಪ್ರಗತಿಗೆ ಸಹಕರಿಸಿ:ಖೊದ್ನಾಪೂರ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.1:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ನೌಕರಿ ಅಥವಾ ಉದ್ಯೋಗ ಪಡೆಯುವುದು ಕಷ್ಟಕರವಾಗಿದ್ದು, ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಪಡೆದ ನಂತರ ಕೇವಲ ಉದ್ಯೋಗಿ ಆಕಾಂಕ್ಷಿಗಳಾಗಿ ಕಾಯದೇ ತಮ್ಮಲಿರುವ ಕೌಶಲ್ಯಗಳನ್ನು ಬಳಸಿಕೊಂಡು ಯಾವುದೇ ಸ್ವಯಂ ಉದ್ಯೋಗವನ್ನು ಕೈಕೊಳ್ಳಬೇಕು ಎಂದು ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್. ಖೊದ್ನಾಪುರ ಅವರು ಅಭಿಪ್ರಾಯಪಟ್ಟರು.
ಸಮೀಪದ ಮನಗೂಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಕಾಲೇಜಿನ ಐ.ಕ್ಯೂ.ಎ.ಸಿ ಘಟಕದಡಿಯಲ್ಲಿ ಜರುಗಿದ ಉದ್ಯಮಶೀಲತಾ ಕೌಶಲ್ಯಗಳು ವಿಷಯ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ತಮ್ಮ ಮೂಲ ಕಸುಬು, ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ಉದ್ಯೋಗ, ವ್ಯವಹಾರ, ವ್ಯಾಪಾರ, ಉದ್ಯಮ, ಸಣ್ಣ-ಗುಡಿ ಕೈಗಾರಿಕೆಗಳನ್ನು ಕೈಕೊಂಡು ಜೀವನೋಪಾಯಕ್ಕೊಂದು ಆರ್ಥಿಕ ಭದ್ರತೆ ಮತ್ತು ಸ್ವಾವಲಂಬನೆಯನ್ನು ಸಾಧಿಸಬೇಕೆಂದು ಸಲಹೆ ನೀಡಿದರು.
ಇಂತಹ ತರಬೇತಿಯಲ್ಲಿ ವ್ಯವಹಾರ ಹೇಗೆ ಪ್ರಾರಂಭಿಸಬೇಕು, ಅದಕ್ಕೆ ಬೇಕಾದ ಬಂಡವಾಳ ಸಂಗ್ರಹಣೆ, ಆರ್ಥಿಕ ನೆರವು, ಸೌಲಭ್ಯಗಳು ಮತ್ತು ವ್ಯವಹಾರವನ್ನು ಯಶಸ್ವಿಯಾಗಿ ಕೈಕೊಳ್ಳಬೇಕಾದ ಎಲ್ಲ ಅವಶ್ಯಕ ಮಾಹಿತಿ ಮತ್ತು ತಿಳುವಳಿಕೆಯನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಈ ತರಬೇತಿಯಿಂದ ಪ್ರಾಯೋಗಿಕ ಜ್ಞಾನ, ಮಾರುಕಟ್ಟೆ ನಿರ್ವಹಣೆ, ಉದ್ಯಮಶೀಲತೆಯ ಕೌಶಲ್ಯಗಳನ್ನು ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಸರಕಾರವು ನೀಡುತ್ತಿರುವ ಇಂತಹ ಉದ್ಯಮಶೀಲತಾ ತರಬೇತಿ ಪಡೆದು ತಮ್ಮ ತಮ್ಮ ಪ್ರದೇಶದಲ್ಲಿ, ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಯಂ ಉದ್ಯೊಗವನ್ನು ಕೈಕೊಳ್ಳಬೇಕು. ಸರಕಾರದ ಮಹತ್ತರವಾದ ಉದ್ದೇಶವಾಗಿರುವ ಈ ತರಬೇತಿ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ತಮ್ಮಲ್ಲಿರುವ ಉದ್ಯಮಶೀಲತಾ ಗುಣ ಮತ್ತು ಕೌಶಲ್ಯಗಳನ್ನು ಬಳಸಿಕೊಂಡು ಯಶಸ್ವಿ ಉದ್ಯಮಿದಾರರಾಗಿ ಹೊರ ಹೊಮ್ಮಬೇಕೆಂದು ಸಲಹೆ ನೀಡಿದರು.
ಸ್ಟಾರ್ಟ ಅಫ್, ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ಇಂಡಿಯಾ, ಡಿಜಿಟಲ್ ಹಾಗೂ ಸ್ಕೀಲ್ ಇಂಡಿಯಾ, ಮುದ್ರಾ ಮತ್ತು ಯುವ ಕೌಶಲ್ಯಾಭಿವೃದ್ಧಿ ಯೋಜನೆಗಳಿಂದ ಆರ್ಥಿಕ ಸೌಲಭ್ಯ ಪಡೆದು ಸ್ವಯಂ ಉದ್ಯೋಗ ಕೈಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾ ರಾಷ್ಟ್ರದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಸಚೀನ ಪಾಟೀಲ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಉದ್ಯಮಿ ಆಗುವ ಕನಸು, ಆಸಕ್ತಿ, ಅಭಿರುಚಿ ಮತ್ತು ಅವರಲ್ಲಿರುವ ಸುಪ್ತವಾದ ಪ್ರತಿಭೆಯನ್ನು ಗುರುತಿಸಿ ಸ್ವಂತ ವ್ಯವಹಾರ, ಕೈಗಾರಿಕೆ, ಉದ್ಯಮವನ್ನು ಕೈಗೊಳ್ಳಲು ಅಗತ್ಯವಾದ ಉದ್ಯಮಶೀಲತೆಯ ಗುಣಗಳನ್ನು ಒಡಮೂಡಿಸುವುದು ಮತ್ತು ಅವರು ಸ್ವಯಂ ಉದ್ಯೋಗವನ್ನು ಕೈಕೊಳ್ಲಲು ಬೇಕಾದ ಅಗತ್ಯ ಹಣಕಾಸು ನೆರವು ನೀಡುವುದೇ ಈ ತರಬೇತಿಯ ಪ್ರಮುಖ ಧ್ಯೇಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಚಾಲಕಿ ಡಾ. ನೀಲಮ್ಮ ಹತ್ತಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಐ.ಎಸ್.ಮಠಪತಿ, ಪ್ರೊ. ಎಸ್.ಎಸ್ ಚವ್ಹಾಣ, ಪ್ರೊ. ಎಸ್.ಆರ್.ರಜಪೂತ, ಶ್ರೀ ಮಹೇಶ ಕಲ್ಲೂರ, ಶ್ರೀ ಎಂ.ಬಿ.ಹಡಪದ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.