ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಣವೇ ಚಾಲನಾ ಶಕ್ತಿ

ಕಲಬುರಗಿ:ಮಾ.8: ಶಿಕ್ಷಣವು ವ್ಯಕ್ತಿಗೆ ಕೇವಲ ಪ್ರಮಾಣ ಪತ್ರ ಮಾತ್ರ ನೀಡದೆ, ಜ್ಞಾನ, ಬುದ್ಧಿ, ಕೌಶಲಗಳನ್ನು ನೀಡುತ್ತದೆ. ಇದರಿಂದ ವ್ಯಕ್ತಿಯು ಶಕ್ತಿಯಾಗಿ ಹೊರಹೊಮ್ಮುವ ಮೂಲಕ ರಾಷ್ಟ್ರದ ಪರಿವರ್ತನೆಗೆ ಕಾರಣವಾಗುತ್ತಾನೆ. ತನ್ಮೂಲಕ ಶಿಕ್ಷಣವು ರಾಷ್ಟ್ರದ ಅಭಿವೃದ್ಧಿಗೆ ಚಾಲನಾ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯ ಜೆ.ಆರ್. ನಗರದ ‘ಶ್ರೇಯಸ್ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಣವು ಮಾನವ ಅಭಿವೃದ್ಧಿಯ ಒಂದು ಪ್ರಮುಖ ಅಂಗ. ಮಾನವ ಅಭಿವೃದ್ದಿಗೂ, ಆರ್ಥಿಕಾಭಿವೃದ್ಧಿಗೂ ಅತ್ಯಂತ ನಿಕಟವಾದ ಸಂಬಂಧವಿದೆ. ಆದ್ದರಿಂದಲೇ ಇಂದು ಭಾರತ, ಶಿಕ್ಷಣ ಅಭಿವೃದ್ದಿಗೆ ಅನೇಕ ವಿಧಾನಗಳಲ್ಲಿ ಪ್ರಯತ್ನಿಸುತ್ತಿದೆ. ಶಿಕ್ಷಣವು ಸಾಮಾಜಿಕ ಪರಿವರ್ತನೆಯ ಒಂದು ಪ್ರಮುಖ ಸಾಧನವಾಗಿದೆ. ವರ್ತನೆಯಲ್ಲಿ ಸಕಾರಾತ್ಮಕವಾದ ಬದಲಾವಣೆ ಶಿಕ್ಷಣದಿಂದಲೇ ಸಾಧ್ಯವಿದೆ ಎಂದರು.
ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದ ಮುಖ್ಯಸ್ಥ ಅಸ್ಲಾಂ ಶೇಖ್ ಮಾತನಾಡಿ, ಸರ್ಕಾರ ಸಾಕ್ಷರತೆಯನ್ನು ಹೆಚ್ಚಿಸಲು ಸಾಕಷ್ಟು ಹಣ ವ್ಯಯ ಮಾಡಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರ ಬಗ್ಗೆ ಎಲ್ಲೆಡೆ ಜಾಗೃತಿ ಉಂಟಾಗಿ, ಯೋಜನೆಗಳ ಸದುಪಯೋಗವನ್ನು ಪಡಿಸಿಕೊಂಡು ಪ್ರತಿಶತ ಸಾಕ್ಷರತೆ ಸಾಧಿಸುವುದು ಅಗತ್ಯವಾಗಿದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಪ್ರಿಯಾಂಕಾ ದೋಟಿಕೊಳ್ಳ, ನೀಲೊಪರ್ ಶೇಖ್, ಶೃತಿ ಚವ್ಹಾಣ, ಲಕ್ಷ್ಮೀ ಸುತಾರ, ಪ್ರಿಯಾಂಕಾ ಗಾಣೂರ, ಶ್ವೇತಾ ಠಾಕೂರ, ಶಾರದಾ ಕಲೋಜಿ, ಸೌಭಾಗ್ಯ ಸುತಾರ, ಬೀರಪ್ಪ ಘೋಡಕೆ ಸೇರಿದಂತೆ ಮತ್ತಿತತರು ಪಾಲ್ಗೊಂಡಿದ್ದರು.