ಕಲಬುರಗಿ,ಸೆ.08: ಶಿಕ್ಷಣವು ವ್ಯಕ್ತಿಗೆ ಕೇವಲ ಪ್ರಮಾಣ ಪತ್ರ ಮಾತ್ರ ನೀಡದೆ, ಜ್ಞಾನ, ಬುದ್ಧಿ, ಕೌಶಲಗಳನ್ನು ನೀಡುತ್ತದೆ. ಇದರಿಂದ ವ್ಯಕ್ತಿಯು ಶಕ್ತಿಯಾಗಿ ಹೊರಹೊಮ್ಮುವ ಮೂಲಕ ರಾಷ್ಟ್ರದ ಪರಿವರ್ತನೆಗೆ ಕಾರಣವಾಗುತ್ತಾನೆ. ತನ್ಮೂಲಕ ಶಿಕ್ಷಣವು ರಾಷ್ಟ್ರದ ಅಭಿವೃದ್ಧಿಗೆ ಚಾಲನಾ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಣವು ಮಾನವ ಅಭಿವೃದ್ಧಿಯ ಒಂದು ಪ್ರಮುಖ ಅಂಗ. ಮಾನವ ಅಭಿವೃದ್ದಿಗೂ, ಆರ್ಥಿಕಾಭಿವೃದ್ಧಿಗೂ ಅತ್ಯಂತ ನಿಕಟವಾದ ಸಂಬಂಧವಿದೆ. ಆದ್ದರಿಂದಲೇ ಇಂದು ಭಾರತ, ಶಿಕ್ಷಣ ಅಭಿವೃದ್ದಿಗೆ ಅನೇಕ ವಿಧಾನಗಳಲ್ಲಿ ಪ್ರಯತ್ನಿಸುತ್ತಿದೆ. ಶಿಕ್ಷಣವು ಸಾಮಾಜಿಕ ಪರಿವರ್ತನೆಯ ಒಂದು ಪ್ರಮುಖ ಸಾಧನವಾಗಿದೆ. ವರ್ತನೆಯಲ್ಲಿ ಸಕಾರಾತ್ಮಕವಾದ ಬದಲಾವಣೆ ಶಿಕ್ಷಣದಿಂದಲೇ ಸಾಧ್ಯವಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ.ಸತೀಶ್ ಟಿಸಣಮನಿ ಮಾತನಾಡಿ, ಸರ್ಕಾರ ಸಾಕ್ಷರತೆಯನ್ನು ಹೆಚ್ಚಿಸಲು ಸಾಕಷ್ಟು ಹಣ ವ್ಯಯ ಮಾಡಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರ ಬಗ್ಗೆ ಎಲ್ಲೆಡೆ ಜಾಗೃತಿ ಉಂಟಾಗಿ, ಯೋಜನೆಗಳ ಸದುಪಯೋಗವನ್ನು ಪಡಿಸಿಕೊಂಡು ಪ್ರತಿಶತ ಸಾಕ್ಷರತೆ ಸಾಧಿಸುವುದು ಅಗತ್ಯವಾಗಿದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಪ್ರಾಚಾರ್ಯ ಭೀಮಾಶಂಕರ ಎಸ್.ಘತ್ತರಗಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಪ್ರಮುಖರಾದ ರಜಿನಿ ಎನ್.ತಳವಾರ, ಸವಿತಾ ಜೆ.ಧಾಕಳಿ, ತೇಜಸ್ವಿನಿ ಎಸ್.ಮಠಪತಿ, ಸ್ನೇಹಾ ವಿ.ಮಠಪತಿ, ಸಂಧ್ಯಾರಾಣಿ ಚವ್ಹಾಣ, ಸುಪ್ರಿಯಾ ಚವ್ಹಾಣ, ನಾಗೇಶ್ ಎಸ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.