ರಾಷ್ಟ್ರದ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅವಿಸ್ಮರಣೀಯ

ಕಲಬುರಗಿ.ಸೆ.15: ಪ್ರತಿಯೊಂದು ರಾಷ್ಟ್ರ ಪ್ರಗತಿ ಹೊಂದಬೇಕಾದರೆ ಯೋಜನೆಗಳು ತುಂಬಾ ಅಗತ್ಯವಿದೆಯೆಂದು ಪ್ರತಿಪಾದಿಸಿ, ನಮ್ಮ ರಾಷ್ಟ್ರವನ್ನು ಯೋಜನಾಬದ್ಧವಾಗಿ ರೂಪುಗೊಳಿಸಿದ ಸರ್.ಎಂ.ವಿಶ್ವೇಶ್ವರಯ್ಯನವರ ಕೊಡುಗೆ ಬಹಳ ಅಮೂಲ್ಯವಾಗಿದೆ. ಅವರ ಚಿಂತನೆಗಳು ಸಾರ್ವಕಾಲಿಕವಾಗಿದ್ದು, ಪ್ರತಿಯೊಂದು ರಾಷ್ಟ್ರ ಅಳವಡಿಸಿಕೊಂಡರೆ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆ ಎಂದು ಇಂಜಿನೀಯರ್ ರಿಶಿತಾ ಪಿ.ಗುತ್ತೇದಾರ ಅಭಿಮತ ವ್ಯಕ್ತಪಡಿಸಿದರು.
ನಗರದ ಸಾಯಿ ಮಂದಿರ ಸಮೀಪವಿರುವ ‘ಕೊಹಿನೂರ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಸರ್.ಎಂ.ವಿಶ್ವೇಶ್ವರಯ್ಯನವರ 162ನೇ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ವಿಶ್ವೇಶ್ವರಯ್ಯನವರದು ದೂರದೃಷ್ಟಿಯ ಮೇರು ವ್ಯಕ್ತಿತ್ವ. ಶ್ರೇಷ್ಠ ಇಂಜಿನೀಯರಾಗಿ, ಆರ್ಥಿಕ ಚಿಂತಕರಾಗಿ, ತತ್ವಜ್ಞಾನಿಯಾಗಿ ರಾಷ್ಟ್ರದ ಅಭಿವೃದ್ಧಿಗೆ ಹಗಲಿರಳು ಶ್ರಮಿಸಿದ್ದರಿಂದಲೇ, ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರು ಹಾಕಿಕೊಟ್ಟ ‘ಯೋಜನಾ ಮಾರ್ಗ’ದಲ್ಲಿ ಸಾಗಿದ್ದರೆ ಬಡತನ, ನಿರೂದ್ಯೋಗ, ಅನಕ್ಷರತೆ, ಹಿಂದುಳಿದಿರುವಿಕೆ ಅಂತಹ ಜ್ವಲಂತ ಸಮಸ್ಯೆಗಳು ನಿರ್ಮೂಲನೆಯಾಗುತ್ತವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ.ಕಂಟೆಗೋಳ್, ಉಪನ್ಯಾಸಕರಾದ ಪೂನಂ ಎಸ್.ಜಿ., ರೊಹಿಣಿ ತೋರಣ್, ನಾಗರಾಜ ಜಮದಾರ, ಸತೀಶ್ ಪಾಟೀಲ, ದೇವೇಂದ್ರ ಎಸ್.ಮರಮಕಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.