ರಾಷ್ಟ್ರದ ಅಭಿವೃದ್ಧಿಗೆ ರೈಲು ಸಾರಿಗೆಯ ಕೊಡುಗೆ ಅನನ್ಯ

ಕಲಬುರಗಿ:ಎ.17: ನಮ್ಮ ದೇಶದಲ್ಲಿ ನೂರಾರು ವರ್ಷಗಳಿಂದ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಸಂಚಾರ ಮತ್ತು ಸರಕುಗಳ ಸಾಗಾಣಿಕೆಯ ಸೇವೆಯ ಮೂಲಕ ಭಾರತೀಯ ರೈಲು ಸಾಕಷ್ಟು ಅನಕೂಲವಾಗಿದೆ. ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿ, ವ್ಯಾಪಾರ-ವ್ಯವಹಾರಗಳ ವಿಸ್ತರಣೆ, ಉದ್ಯೋಗಾವಕಾಶಗಳ ಹೆಚ್ಚಳ, ಸರ್ಕಾರಕ್ಕೆ ಆದಾಯ, ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿದಂತೆ ಮುಂತಾದ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಿ ಸೇವೆ ಸಲ್ಲಿಸುವ ಮೂಲಕ ರೈಲು ಸಾರಿಗೆಯು ರಾಷ್ಟ್ರದ ಅಭಿವೃದ್ಧಿಗೆ ತನ್ನದೇ ಆದ ಅನನ್ಯವಾದ ಕೊಡುಗೆಯನ್ನು ನೀಡುತ್ತಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

     ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ 'ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ'ಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ 'ಭಾರತೀಯ ರೈಲು ಸಾರಿಗೆ ಪ್ರಾರಂಭÀದ 170ನೇ ವರ್ಷಾಚರಣೆ'ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ದೇಶದಲ್ಲಿ 1853ರ ಏ.16ರಂದು ಮುಂಬೈ-ಥಾಣಾ ನಡುವೆ 34 ಕಿ.ಮೀ. ದೂರ ರೈಲು ಸಂಚರಿಸುವ ಮೂಲಕ ಅಧಿಕೃತವಾಗಿ ನಮ್ಮ ದೇಶದಲ್ಲಿ ರೈಲು ಸಾರಿಗೆ ಪ್ರಾರಂಭವಾಯಿತು. ಇಂದು ಭಾರತದ ರೈಲ್ವೆ ಏಷ್ಯಾ ಖಂಡದಲ್ಲೇ ಅತ್ಯಂತ ದೊಡ್ಡದು ಹಾಗೂ ಜಗತ್ತಿನಲ್ಲಿ ನಾಲ್ಕನೇ ಅತಿದೊಡ್ಡ ರೈಲ್ವೆ ಸಂಪರ್ಕ ಜಾಲವಾಗಿದೆ. ದೇಶದ ಅತ್ಯಂತ ದೊಡ್ಡ ಸಾರ್ವಜನಿಕ ಉದ್ಯಮವೂ ಆಗಿದೆ. ರೈಲ್ವೆ ಸೇವೆಯ ಖಾಸಗೀಕರಣ, ಏಕ ಗೇಜ್ ವ್ಯವಸ್ಥೆಯ ಜಾರಿ, ಕಂಪ್ಯೂಟರೀಕರಣ, ವಿದ್ಯುತ್ ಮತ್ತು ಡೀಸೆಲ್ ಇಂಜಿನ್‍ಗಳ ಬಳಕೆ, ಪ್ರಯಾಣಿಕರ ಸೌಲಭ್ಯಗಳ ಉನ್ನತೀಕರಣ, ತಂತ್ರಜ್ಞಾನ ಆಧುನೀಕರಣ, ರೈಲು ಸುರಕ್ಷತಾ ಕ್ರಮಗಳ ಜಾರಿ ಸೇರಿದಂತೆ ಅನೇಕ ಸುಧಾರಣೆ ಕ್ರಮಗಳನ್ನು ರೈಲ್ವೆ ಸಾರಿಗೆ ಸುಧಾರಣೆಗಾಗಿ ಜಾರಿಗೆ ತರಲಾಗಿದೆ ಎಂದು ವಿವರಿಸಿದರು.

  ಝಾಪೂರ್ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ ಮಾತನಾಡಿ, ರೈಲ್ವೆಯು ಜನಸಾಮಾನ್ಯರಿಗೆ ಒಂದು ವರದಾನವಾಗಿದೆ. ಅದು ರಾಷ್ಟ್ರದ ನರನಾಡಿಯಂತೆ ಕಾರ್ಯನಿರ್ವಹಿಸುತ್ತದೆ ಎಂದರು.
  ಕಾರ್ಯಕ್ರಮದಲ್ಲಿ ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ಡಾ.ಸತೀಸ್ ಟಿ.ಸಣಮನಿ, ದತ್ತು ಹಡಪದ ಹಾಗೂ ವಿದ್ಯಾರ್ಥಿಗಳಿದ್ದರು.