ರಾಷ್ಟ್ರದ ಅಭಿವೃದ್ಧಿಗೆ ರಿಜರ್ವ ಬ್ಯಾಂಕ್‍ನ ಕೊಡುಗೆ ಅನನ್ಯ

ಕಲಬುರಗಿ:ಎ.1: ಭಾರತೀಯ ರಿಜರ್ವ ಬ್ಯಾಂಕು ರಾಷ್ಟ್ರದ ಬ್ಯಾಂಕಾಗಿ ಹಣದುಬ್ಬರ ಹಾಗೂ ಹಣದಕುಸಿತದ ಸನ್ನಿವೇಶಗಳ ನಿರ್ವಹಣೆ, ಸಾಲ ನಿಯಂತ್ರಣ, ವಿದೇಶಿ ವಿನಿಮಯ ಪಾಲಕ, ಅಂತಿಮ ಸಾಲದಾತ, ತೀರುವೆ ಮನೆ ಕಾರ್ಯ, ಕೃಷಿ ಹಾಗೂ ಕೈಗಾರಿಗೆಳ ಅಭಿವೃದ್ಧಿಗಾಗಿ ಹಣಕಾಸಿನ ಸೌಲಭ್ಯ, ಸಂಶೋಧನೆ ಮತ್ತು ವಿಶೇಷ ಕಾರ್ಯಗಳು ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕಳೆದ ಎಂಟು ದಶಕಗಳಿಂದ ತನ್ನದೇ ಆದ ಅನನ್ಯವಾದ ಕೊಡುಗೆಯನ್ನು ನೀಡುತ್ತಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ಸ್ವಾತಿ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಲಾಗಿದ್ದ ‘ಭಾರತೀಯ ರಿಜರ್ವ ಬ್ಯಾಂಕ್‍ನ 88ನೇ ಸಂಸ್ಥಾಪನಾ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಿಜರ್ವ ಬ್ಯಾಂಕು ಆಗಿನ ಬ್ರಿಟಿಷ ಸರ್ಕಾರ 1935ರ ಎಪ್ರೀಲ್-1 ರಂದು ಸ್ಥಾಪಿಸಿತು. ಸ್ವಾತಂತ್ರ್ಯನಂತರ 1949ರ ಜನವರಿ-1 ರಂದು ರಾಷ್ಟ್ರೀಕರಣಗೊಳಿಸಲಾಯಿತು. ಆರ್‍ಬಿಐ ಹಣದ ಮೌಲ್ಯವನ್ನು ಕಾಪಾಡುತ್ತದೆ. ತನ್ನ ಹಣಕಾಸಿನ ನೀತಿಯ ಮೂಲಕ ರಾಷ್ಟ್ರದ ಆಂತರಿಕ ಆರ್ಥಿಕ ಸ್ಥಿರತೆಯನ್ನು ತರುತ್ತದೆ. ಮಿತಿಮೀರಿದ ಮತ್ತು ಅನಾವಶ್ಯಕವಾದ ಅನುಭೋಗವನ್ನು ನಿಯಂತ್ರಿಸಿ, ಬಂಡವಾಳವನ್ನು ಉತ್ಪಾದಕ ಕ್ರಿಯೆಗಳಿಗೆ ಹಂಚುವ ಕಾರ್ಯ ಮಾಡುವ ಮೂಲಕ ರಾಷ್ಟ್ರ ತೀರ್ವ ಆರ್ಥಿಕಾಭಿವೃದ್ಧಿಯನ್ನು ಸಾಧಿಸುವ ಪ್ರಮುಖವಾದ ಕೆಲಸವನ್ನು ಮಾಡುತ್ತದೆ ಎಂದರು.

ಆರ್‍ಬಿಐಯು, ನಬಾರ್ಡನ ಮೂಲಕ ಕೃಷಿ ಕ್ಷೇತ್ರ ಮತ್ತು ಗ್ರಾಮೀಣಾಭಿವೃದ್ಧಿಗೆ ಹಣಕಾಸಿನ ಸೌಲಭ್ಯವನ್ನು ಒದಗಿಸಿಕೊಡುತ್ತದೆ. ಇಎಫ್‍ಸಿ, ಎಸ್‍ಎಫ್‍ಸಿ, ಐಡಿಬಿಐ, ಯುಟಿಐನಂತಹ ಸಂಸ್ಥೆಗಳ ಮೂಲಕ ಕೈಗಾರಿಕೆಗಳ ಅಭಿವೃದ್ಧಿಗೆ ಆರ್ಥಿಕ ಸಹಾಯವನ್ನು ಮಾಡುತ್ತದೆ. ಹಣಕಾಸಿನ ಪೂರೈಕೆ, ಬ್ಯಾಂಕುಗಳ ಕಾರ್ಯಾಚರಣೆ, ಕೇಂದ್ರ ಮತ್ತು ರಾಜ್ಯ ಹಣಕಾಸಿನ ವಿಷಯಗಳು, ಸಂದಾಯ ಶಿಲ್ಕು ಸೇರಿದಂತೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಹೊಸ ಸಂಶೋಧನೆಗಳನ್ನು ಮಾಡಿ, ಅದರ ಅಂಕಿ-ಅಂಶ, ಫಲಿತಾಂಶಗಳನ್ನು ವಿಶೇಷ ಹೊತ್ತಿಗೆಗಳ ಮೂಲಕ ಪ್ರಕಟಿಸುತ್ತದೆ. ರಿಜರ್ವ ಬ್ಯಾಂಕ್ ಸ್ಥಾಪನಗೆ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಶ್ರಮ ಮರೆಯುವಂತಿಲ್ಲ ಎಂದರು.

   ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಪ್ರಮುಖರಾದ ಶಿವಯೋಗಪ್ಪ ಬಿರಾದಾರ,ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ, ಶಿಕ್ಷಕರಾದ ಸ್ವಾತಿ ಆರ್.ಪವಾಡಶೆಟ್ಟಿ, ಪ್ರೀತಿ ಜೆ.ಬಿರಾದಾರ, ಚಂದ್ರಲೇಖಾ ಪೂರ್ಮಕರ್, ಸಾವಿತ್ರಿ ಎನ್.ಪಾಟೀಲ, ಕಾಶಮ್ಮ ಎಸ್.ಚಿಂಚೋಳಿ, ವರ್ಷಾರಾಣಿ, ಈಶ್ವರಿ ಹಂಗರಗಿ, , ಶಿಲ್ಪಾ ಎಸ್.ಕೆ., ಮಾಯಾದೇವಿ ಲಕ್ಷ್ಮೀ ತಾಂಡೂರಕರ್, ವಿಜಯಲಕ್ಷ್ಮೀ ಸೇರಿದಂತೆ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.