
ಕಲಬುರಗಿ: ಮೇ.18:ಮ್ಯೂಸಿಯಂಗಳು ನಾಡು, ದೇಶ, ವಿಶ್ವದ ಧಾರ್ಮಿಕ, ಐತಿಹಾಸಿಕ, ಸಾಂಸ್ಕøತಿಕ, ಪಾರಂಪರಿಕ, ಕಲೆ, ಸಾಹಿತ್ಯ, ಸಂಸ್ಕøತಿ, ಪರಂಪರೆಯ ಕುರುಹುಗಳು, ಮೌಲ್ಯಗಳನ್ನು ಒಳಗೊಂಡ ವಸ್ತುಗಳನ್ನು ಸಂರಕ್ಷಿಸುವ ಮೂಲಕ ಸಾಕ್ಷಾಧಾರಗಳನ್ನು ಒದಗಿಸಿಕೊಡುತ್ತವೆ. ಅದರ ಅಧ್ಯಯನದ ಆಧಾರದ ಮೇಲೆ ರಾಷ್ಟ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಹಾಕಿಕೊಳ್ಳಬಹುದಾಗಿದೆ. ಹೀಗಾಗಿ ಮ್ಯೂಸಿಯಂಗಳು ಪರೋಕ್ಷವಾಗಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ದೇವಿ ನಗರದಲ್ಲಿರುವ ‘ವಿದ್ಯಾಸಿರಿ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಅಂತಾರಾಷ್ಟ್ರೀಯ ಮ್ಯೂಸಿಯಂ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮ್ಯೂಸಿಯಂಗಳಿಗೆ ಭೇಟಿ ನೀಡಿ, ಅಲ್ಲಿನ ಕಲೆ, ವಸ್ತುಗಳನ್ನು ವೀಕ್ಷಿಸಬೇಕು. ಇದರಿಂದ ಸಾಕಷ್ಟು ಜ್ಞಾನ ಲಭ್ಯವಾಗಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸವು ಪಠ್ಯ ಪೂರಕ ಮತ್ತು ನಾಡಿನ ಭವ್ಯ ಪರಂಪರೆಯನ್ನು ಬಿಂಬಿಸುವ ಸ್ಥಳಗಳು, ಮ್ಯೂಸಿಯಂಗಳಾಗಿರಬೇಕು. ಇವುಗಳ ಸಂರಕ್ಷಣೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ, ಶಿಕ್ಷಕ ಅಣ್ಣಾರಾಯ ಎಚ್.ಮಂಗಾಣೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಟ್ಯೂಟೋರಿಯಲ್ಸ್ ಮುಖ್ಯಸ್ಥ ಸತೀಶ್ ಹತ್ತಿ ಹಾಗೂ ವಿದ್ಯಾರ್ಥಿಗಳಿದ್ದರು.