ರಾಷ್ಟ್ರದ ಅಭಿವೃದ್ಧಿಗೆ ಪ್ರವಾಸೋದ್ಯಮ ಪೂರಕ

ಕಲಬುರಗಿ,ಸೆ.27:ಸುಕ್ಷೇತ್ರಗಳು, ಸ್ಮಾರಕಗಳು, ನೈಸರ್ಗಿಕ ಮತ್ತು ಐತಿಹಾಸಿಕ ಸ್ಥಳಗಳನ್ನು ಖುದ್ದಾಗಿ ವೀಕ್ಷಣೆ ಮಾಡಿದರೆ ನೈಜ ಅನುಭವ, ಜ್ಞಾನ ಪಡೆಯಲು ಸಾಧ್ಯವಾಗುತ್ತದೆ. ಇವೆಲ್ಲವುಗಳು ದೇಶದ ಇತಿಹಾಸ, ಪರಂಪರೆಯ ಕುರುಹಳಾಗಿವೆ. ಪ್ರವಾಸೋದ್ಯಮದಿಂದ ನೇರ ಹಾಗೂ ಪರೋಕ್ಷ ಉದ್ಯೋಗಗಳ ಸಂಖ್ಯೆ ಹೆಚ್ಚಾಗಿ ಆರ್ಥಿಕ ಬೆಳವಣಿಗೆಯ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದ ವತಿಯಿಂದ ಬುಧವಾರ ಜರುಗಿದ ನಗರದ ಬಹುಮನಿ ಕೋಟೆ ಮತ್ತು ಜಾಮೀಯಾ ಮಸೀದಿ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
‘ದೇಶ ಸುತ್ತು, ಕೋಶ ಓದು’ ಎಂಬ ಮಾತು ಪ್ರವಾಸದ ಮಹತ್ವವನ್ನು ನೀಡುತ್ತದೆ. ಪ್ರಸ್ತುತವಾಗಿ ನಮ್ಮ ದೇಶದಲ್ಲಿ ಅನೇಕ ಸ್ಮಾರಕಗಳು, ಐತಿಹಾಸಿಕ ಸ್ಥಳಗಳ ಬಗ್ಗೆ ಹೆಚ್ಚಿನ ಮಹತ್ವ, ಸಂಶೋಧನೆ, ಅಭಿವೃದ್ಧಿ ಜರುಗಬೇಕು. ವಿಶ್ವ ಪರಂಪರೆಯು ಮನುಕುಲದ ಸಂಪತ್ತಾಗಿದೆ. ನಮ್ಮ ದೇಶದ ಶ್ರೀಮಂತ ಸಂಸ್ಕøತಿ, ಪರಂಪರೆಯನ್ನು ಸಂರಕ್ಷಿಸುವ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇದರ ಬಗ್ಗೆ ಎಲ್ಲೆಡೆ ವ್ಯಾಪಕವಾದ ಜಾಗೃತಿಯಾಗಬೇಕು. ಭವ್ಯವಾದ ಅನೇಕ ತಾಣಗಳು, ಸ್ಮಾರಕಗಳು, ಇಂದು ಅವನತಿಯ ಅಂಚಿನಲ್ಲಿವೆ. ಇವುಗಳು ನಾಶವಾದರೆ ಮುಂದಿನ ಪೀಳಿಗೆಗೆ ಕೇವಲ ಚಿತ್ರದಲ್ಲಿ ನೋಡಲು ಮಾತ್ರ ಸಾಧ್ಯವಿದೆ.ಆದ್ದರಿಂದ ಅವುಗಳನ್ನು ಸಂರಕ್ಷಿಸುವದರಿಂದ ಇತಿಹಾಸ ಮತ್ತು ಮಾನವನ ಸಂಸ್ಕøತಿ, ಪರಂಪರೆ ಉಳಿಯುತ್ತದೆ ಎಂದು ನುಡಿದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಇಲ್ಲಿನ ಬಹುಮನಿ ಕೋಟೆ ಮತ್ತು ಜಾಮೀಯಾ ಮಸೀದಿ ದೇಶದ ಇತಿಹಾಸದಲ್ಲಿ ಪ್ರಸಿದ್ದಿ ಪಡೆದಿದೆ. ಇಲ್ಲಿನ ವಾಸ್ತುಶಿಲ್ಪ ಮನೋಜ್ಞವಾಗಿದೆ. ವಿದ್ಯಾರ್ಥಿಗಳು ಕೇವಲ ಪುಸ್ತಕದ ಅಧ್ಯಯನ ಮಾಡಿದರೆ ಅವರಿಗೆ ಸ್ಪಷ್ಟವಾದ ಚಿತ್ರಣ ಮೂಡುವುದಿಲ್ಲ. ಬದಲಿಗೆ ಐತಿಹಾಸಿಕ, ಪಾರಂಪರಿಕ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ವೀಕ್ಷಣೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಸದಸ್ಯರಾದ ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ಪರಮೇಶರ್ವರ ಬಿ.ದೇಸಾಯಿ, ದೇವೇಂದ್ರಪ್ಪ ಗಣಮುಖಿ, ನಾಗೇಶ ತಿಮಾಜಿ, ತರಬೇತಿ ಸಂಸ್ಥೆಯ ಸಿಬ್ಬಂದಿಗಳಾದ ಪ್ರಿಯಾಂಜಾ ದೋಟಿಕೊಳ್ಳ, ಸಾನಿಯಾ ಶೇಖ್, ಪ್ರಮುಖರಾದ ಸಾಯಿಕುಮಾರ, ಪ್ರಿಯಾಂಕಾ, ಅಲೋಕ, ಗಂಗಾಧರ, ಜಗದೀಶ್, ಪ್ರಜ್ವಲ, ಸಚಿನ್, ಆದಿತ್ಯ, ಅಮರ, ನಿರಂಜನ್, ಕೇದಾರ, ಪ್ರಭು, ಜಗದೇವಪ್ಪ, ಕಾವೆರಿ, ಪ್ರೇಮಾಂಜಲಿ, ರೇಣುಕಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.