ರಾಷ್ಟ್ರದ ಅಭಿವೃದ್ಧಿಗೆ ತಂತ್ರಜ್ಞಾನವೇ ಚಾಲನಾ ಶಕ್ತಿ

ಕಲಬುರಗಿ: ಮೇ.11:ಯಾವದೇ ಒಂದು ರಾಷ್ಟ್ರದ ಅಭಿವೃದ್ಧಿಯು, ಆ ರಾಷ್ಟ್ರದ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಯನ್ನು ಅವಲಂಬಿಸಿದೆ. ಅಮೇರಿಕಾ, ರಷ್ಯಾ, ಜಪಾನದಂತಹ ಮುಂದುವರೆದ ಮುಂತಾದ ರಾಷ್ಟ್ರಗಳು ಅಭಿವೃದ್ಧಿಯಾಗಿವೆಯೆಂದರೆ, ಅದು ಅಲ್ಲಿನ ತಂತ್ರಜ್ಞಾನದ ಬೆಳವಣಿಗೆ ಮತ್ತು ಅದರ ಅಳವಡಿಕೆಯಿಂದಾಗಿದೆ. ಹೀಗಾಗಿ, ಯಾವುದೇ ಒಂದು ರಾಷ್ಟ್ರವು ವೇಗವಾಗಿ ಅಭಿವೃದ್ಧಿ ಹೊಂದಬೇಕಾದರೆ ಅದಕ್ಕೆ ತಂತ್ರಜ್ಞಾನವೇ ಚಾಲನಾ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯ ಜೆ.ಆರ್.ನಗರದಲ್ಲಿರುವ ‘ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ ಮತ್ತು ಕಂಪ್ಯೂಟರ ತರಬೇತಿ ಸಂಸ್ಥೆಯಲ್ಲಿ ಗುರುವಾರ ಜರುಗಿದ ‘ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ,ಅವರು ಮಾತನಾಡುತ್ತಿದ್ದರು.
ರಾಜಸ್ಥಾನದ ಪೋಖ್ರಾನ್ ಅಣು ಪರೀಕ್ಷೆಯನ್ನು 1998ರ, ಮೇ-11ರಂದು ಯಶಸ್ವಿಯಾಗಿ ನೆರವೇರಿತು. ಅದರ ಸ್ಮರಣೆಗೋಸ್ಕರ ಈ ದಿನವನ್ನು ‘ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನಿ, ತಂತ್ರಜ್ಞರನ್ನು ಗುರುತಿಸಿ ಗೌರವಿಸುವ ಮೂಲಕ, ಅವರ ಸಾಧನೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ದಿನಾಚರಣೆಯ ಉದ್ದೇಶವಾಗಿದೆ. ನಮ್ಮ ರಾಷ್ಟ್ರ ತಂತ್ರಜ್ಞಾನ ಅಳವಡಿಕೆಯಲ್ಲಿ ಪ್ರಗತಿಯನ್ನು ಹೊಂದುತ್ತಿದೆ. ಎಲ್ಲಾ ಕ್ಷೇತ್ರಗಳಲಿ ತಂತ್ರಜ್ಞಾನದ ಬಳಕೆಯಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆಯ ಪ್ರಮಾಣ ಹೆಚ್ಚಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸತೀಶ್ ಟಿ.ಸಣಮನಿ, ಅಕಾಡೆಮಿಯ ನಿರ್ದೇಶಕ ದತ್ತು ಹಡಪದ, ಕ.ರಾ.ಪ್ರಾ.ಶಾ.ಶಿ.ಸಂಘದ ರಾಜ್ಯ ಉಪಾಧ್ಯಕ್ಷ ಪರಮೇಶ್ವರ ಬಿ.ದೇಸಾಯಿ, ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ ಸೇರಿದಂತೆ ಮತ್ತಿತರರಿದ್ದರು.