ರಾಷ್ಟ್ರದ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣ ಅಗತ್ಯ

ಕಲಬುರಗಿ.ಮೇ.29: ಶಿಕ್ಷಣವು ವ್ಯಕ್ತಿಗೆ ಜ್ಞಾನ, ಬುದ್ದಿ, ಕೌಶಲಗಳನ್ನು ನೀಡಿ ರಾಷ್ಟ್ರದ ಸದೃಢ ಮಾನವ ಸಂಪನ್ಮೂಲ ನಿರ್ಮಾಣ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆಯ ಪ್ರಮುಖ ಸಾಧನವಾಗಿದೆ. ಶಿಕ್ಷಣವು ಕೇವಲ ಪರಿಮಾಣಾತ್ಮಕವಾಗಿರದೇ, ಗುಣಮಟ್ಟದಿಂದ ಕೂಡಿದರೆ ಮಾತ್ರ ರಾಷ್ಟ್ರ ಅಭಿವೃದ್ಧಿ ಸಾಧ್ಯವಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಸಮೀಪದ ಝಾಪೂರ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜರುಗಿದ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲನಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಗುಣಮಟ್ಟದ ಶಿಕ್ಷಣದಿಂದ ಮಾನವ ಸಂಪನ್ಮೂಲ ಅಭಿವೃದ್ಧಿಯಾಗಲು ಸಾಧ್ಯವಿದೆ. ಶ್ರಮಬಲದ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಜನರಿಗೆ ಬದುಕುವ ವಿಧಾನವನ್ನು ಕಲಿಸಿಕೊಡುತ್ತದೆ. ಇದರಿಂದ ಜನರು ಅಭಿವೃದ್ಧಿಯ ಚಟುವಟಿಕೆಗಳಲ್ಲಿ ನೇರವಾಗಿ ಭಾಗವಹಿಸುತ್ತಾರೆ. ಸಂಶೋಧನೆ ಮತ್ತು ಆವಿಷ್ಕಾರಗಳು ಹೆಚ್ಚಾಗಿ ಜರುಗಿ, ರಾಷ್ಟ್ರದ ಸರ್ವಾಂಗೀಣ ಪ್ರಗತಿಯಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು. ಇದರಿಂದ ರಾಷ್ಟ್ರಕ್ಕೆ ಉಜ್ವಲ ಭವಿಷ್ಯವಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ ಮಾತನಾಡಿ, ನಮ್ಮ ದೇಶ ಸ್ವಾತಂತ್ರ್ಯ ಪಡೆದಾಗ ಸಾಕ್ಷರತಾ ಪ್ರಮಾಣ ಶೇ.14ರಷ್ಟು ಇದ್ದದ್ದು, ಇಂದು ಸುಮಾರು ಶೇ.77ಕ್ಕೆ ತಲುಪಿದೆ. ಇದಕ್ಕೆ ಸರ್ಕಾರ ಸಾಕಷ್ಟು ಹಣ ವ್ಯಯ ಮಾಡಿ, ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವೆಲ್ಲಾ ಯೋಜನೆಗಳ ಸದುಪಯೋಗವನ್ನು ಪಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉನ್ನತ ಸಾಧನೆಯನ್ನು ಮಾಡುವ ಮೂಲಕ ಶಾಲೆ, ಗ್ರಾಮದ ಕೀರ್ತಿಯನ್ನು ತರುವ ಕಾರ್ಯ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ, ಶಿವಯೋಗಪ್ಪ ಬಿರಾದಾರ, ಶಾಲೆಯ ಶಿಕ್ಷಕರಾದ ಲಕ್ಕುನಾಯಕ, ಶಾಂತಾಬಾಯಿ ಹಿರೇಮಠ, ವೀರಮ್ಮ ಹಿರೆಕೆನ್ನೂರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಮಾಂಗ್, ಗ್ರಾ.ಪಂ.ಸದಸ್ಯರಾದ ಪೀರಪ್ಪ ದೊಡ್ಡಮನಿ, ಮಲ್ಲಮ್ಮ ಪೂಜಾರಿ, ಶಿಕ್ಷಣಪ್ರೇಮಿ ನಾಗನಗೌಡ್ ಪಾಟೀಲ, ಪ್ರಮುಖರಾದ ಅರುಣಕುಮಾರ ಕಟ್ಟಿಮನಿ, ಸುಧಾಕರ ಜಿ.ಅವಟೆ, ಸಂಗೀತಾ ಕಟ್ಟಿಮನಿ, ಶಿಲ್ಪಾ ಹಳ್ಳಿಕಾರ್, ಅಣ್ಣಾರಾಯ ಪೂಜಾರಿ, ನಾಗರಾಜ ನಾಟಿಕಾರ, ಜೈಭೀಮ ಸರಡಗಿ, ಅರುಣಕುಮಾರ ಕಟ್ಟಿಮನಿ, ಹಣಮಂತ್ ನಾಯ್ಕೋಡಿ, ಸಾಯಬಣ್ಣ ಹೊಸಮನಿ, ಭೀಮರಾಯ ನಾಟಿಕಾರ್, ಶಿವಯೋಗಿ ಹೊಸಮನಿ, ರಾಹುಲ್ ನಾಯ್ಕೋಡಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.