
ಕಲಬುರಗಿ,ಸೆ.19: ಮಳೆ ನೀರು ರಭಸವಾಗಿ ಹರಿದು ಹೋಗುವುದರಿಂದ ಮಣ್ಣಿನ ಸವಕಳಿ, ಪ್ರವಾಹ ಜೊತೆಗೆ ಜೀವರಾಶಿಗಳಿಗೆ ತೊಂದರೆಯಾಗುತ್ತದೆ. ಹರಿಯುವ ನೀರನ್ನು ಅಣೆಕಟ್ಟನ್ನು ನಿರ್ಮಿಸಿ ಸಂಗ್ರಹಿಸುವುದರಿಂದ ಸುತ್ತ-ಮುತ್ತಲಿನ ಪ್ರದೇಶಗಳಿಗೆ ನೀರಾವರಿಯಾಗಿ ತೋಟಗಾರಿಕೆ ವೃದ್ಧಿಯಾಗಿ ಕೃಷಿ ಅಭಿವೃದ್ಧಿಯಾಗುತ್ತದೆ. ಜನ, ಪಶು-ಪ್ರಾಣಿಗಳಿಗೆ ಕುಡಿಯುವ ನೀರು, ವಿದ್ಯುತಶ್ಚಕ್ತಿ ಉತ್ಪಾದನೆ, ಪರಿಸರ ಸಂರಕ್ಷಣೆ, ಅಂತರ್ಜಲ ಮಟ್ಟ ಹೆಚ್ಚಾಗಲು ಅಣೆಕಟ್ಟುಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸುವುದು ಅವಶ್ಯಕವಾಗಿದೆ. ರಾಷ್ಟ್ರದ ಅಭಿವೃದ್ಧಿಗೆ ಅಣೆಕಟ್ಟುಗಳು ಅವಶ್ಯಕವಾಗಿವೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಜಲಾಶಯಕ್ಕೆ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಭೂಮಂಡಲದಲ್ಲಿ ಒಟ್ಟು ಬಳಕೆಗೆ ಲಭ್ಯತೆಯ ನೀರಿನ ಪ್ರಮಾಣ ತುಂಬಾ ಕಡಿಮೆಯಿದ್ದು, ಅದರ ಸದ್ಬಳಕೆಯಾಗಬೇಕು. ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣವಾದ ಅಮೂಲ್ಯವಾದ ಜಲ ಸಂಪತ್ತು ವಿವಿಧ ಕಾರಣಗಳಿಂದ ಬರಿದಾಗುತ್ತಿದೆ. ಇದರಿಂದಾಗಿ ಪರಿಸರದ ಏರು-ಪೇರಾಗುತ್ತಿದೆ. ಜಲ ಸಂರಕ್ಷಣೆ ಸರ್ಕಾರ, ಕೆಲವು ವ್ಯಕ್ತಿ, ಸಂಸ್ಥೆಗಳ ಜವಾಬ್ದಾರಿಯಾಗಿರದೆ, ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಜೀವಜಲ ಸಂರಕ್ಷಣೆ ರಾಷ್ಟ್ರೀಯ ಆಂದೋಲನವಾಗಬೇಕಾಗಿದೆ. ಜಲಸಂಪತ್ತು ಹಾಳಾಗದಂತೆ ತಡೆದು, ಅದನ್ನು ಮುಂದಿನ ಪೀಳಿಗೆಗೆ ಲಭ್ಯವಾಗುವಂತೆ ಮಾಡಬೇಕಾಗಿದೆ ಎಂದರು.
ಜಿ.ಪಂ. ಇಲಾಖೆಯ ನಿವೃತ್ತ ಅಧಿಕಾರಿ ಎಂ.ಬಿ.ನಿಂಗಪ್ಪ ಮಾತನಾಡಿ, ಅರಣ್ಯನಾಶ, ಅತಿಯಾದ ಅಂತರ್ಜಲ ಬಳಕೆ, ಪರಿಸರ ಮಾಲಿನ್ಯ, ಅವೈಜ್ಞಾನಿಕ ನೀರಿನ ಬಳಕೆ, ಮಾನವನ ದುರಾಸೆಯಂತಹ ಮುಂತಾದ ಕಾರಣಗಳಿಂದ ಜಲ ಸಂಪತ್ತಿಗೆ ತೊಂದರೆಯಾಗುತ್ತಿದೆ. ಚಿಂಚೋಳಿ ತಾಲೂಕಿನ ಅರಣ್ಯ ಪ್ರದೇಶ, ಜಲಾಶಯ, ನೈಸರ್ಗಿಕ ಸಂಪತ್ತಿನಿಂದಾಗಿ ಇದು ‘ಮಿನಿ ಮಲೆನಾಡು’ ಎಂಬ ಖ್ಯಾತಿಗೆ ಒಳಗಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಬೇಕಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆಯ ಜಾಗೃತಿಯ ಹಾಡುಗಳನ್ನು ಹಾಡಲಾಯಿತು. ಉಪನ್ಯಾಸಕ ಅಮರನಾಥ ಶಿವಮೂರ್ತಿ, ಶಿಕ್ಷಕ ಮಹಾದೇವಪ್ಪ ಬಿರಾದಾರ, ಕಾಶಿನಾಥ ಸಿಂಪಿ ಹಾಗೂ ಪ್ರವಾಸಿಗರು ಇದ್ದರು.