ರಾಷ್ಟ್ರಕ್ಕೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ : ರಮೇಶ ವೈದ್ಯ


ಸಂಜೆವಾಣಿ ವಾರ್ತೆ
ಹೊಸಪೇಟೆ ಜ8: ದೇಶಾಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ್ ವೈದ್ಯ ಹೇಳಿದರು.
ಸಹಕಾರ ಭಾರತಿ ನೇತೃತ್ವದಲ್ಲಿ ಶನಿವಾರ ತಾಲೂಕಾ ಒಳಾಂಗಣ ಕ್ರಿಡಾಂಗಣದಲ್ಲಿ ಏರ್ಪಡಿಸಿದ್ದ ವಿಜಯನಗರ, ಬಳ್ಳಾರಿ ಜಿಲ್ಲೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಲ್ಲಿರುವ ಎಷ್ಟೋ ಜನ ಗಣ್ಯರು ಸಹಕಾರ ಕ್ಷೇತ್ರದಿಂದಲೇ ಗುರುತಿಸಿಕೊಂಡು ಬಂದಿದ್ದಾರೆ, ಮನುಷ್ಯ ತನ್ನ ಜೀವನದ ಪ್ರತಿ ಹಂತವನ್ನು ಸಹಕಾರ ಕ್ಷೇತ್ರದೊಂದಿಗೆ ಬೆಸೆದುಕೊಂಡಿದ್ದಾನೆ. ಸಹಕಾರವಿಲ್ಲದೇ ಸಮಾಜದಲ್ಲಿ ಏನೂ ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದರು.
ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರ ಸಂಘಗಳು ರೈತರ ಏಳಿಗೆಗೆ ಶ್ರಮಿಸುತ್ತಿವೆ ಎಂದರು. ಸಹಕಾರ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗಬೇಕೆಂದರೇ ಅದರಲ್ಲಿ ರಾಜಕೀಯ ಪ್ರವೇಶವಾಗಬಾರದು ಎಂದು ಸ್ಪಷ್ಟಪಡಿಸಿದರು. ಸಮಾಜಮುಖಿಯಾಗಿ ಕೆಲಸ ಮಾಡುವವರು, ನಿಷ್ಟಾವಂತರೇ ಈ ಕ್ಷೇತ್ರದಲ್ಲಿ ಪ್ರವೇಶ ಮಾಡುವುದು ಒಳ್ಳೆಯದೆಂದು ತಿಳಿಸಿದರು. 1978ರಲ್ಲಿ ಸಹಕಾರ ತತ್ವದೊಂದಿಗೆ ಪ್ರಾರಂಭವಾದ ಸಹಕಾರ ಭಾರತಿ 44 ವರ್ಷಗಳಲ್ಲೇ 29 ರಾಜ್ಯಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು,  750 ಜಿಲ್ಲೆಗಳಲ್ಲಿ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಅಧ್ಯಕ್ಷ ನಂಜನಗೌಡ, ಸಹಕಾರ ಭಾರತಿ ರಾಜ್ಯಾಧ್ಯಕ್ಷ ವಿಶ್ವನಾಥ ಪಾಟಿಲ್, ಜಿಲ್ಲಾಧ್ಯಕ್ಷ ಲಿಯಾಕತ್ ಅಲಿ, ಬಿಡಿಸಿಸಿ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್ ಹರೀಶ್, ಬ್ಯಾಂಕು ನಿರ್ದೇಶಕ ಎಲ್.ಎಸ್.ಆನಂದ್, ಅನಿಲ್ ಜೋಶಿ ಇತರರು ಪಾಲ್ಗೊಂಡಿದ್ದರು. ಎರಡೂ ಜಿಲ್ಲೆಗಳಿಂದ ಸಹಕಾರ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.