ರಾಷ್ಟ್ರಕ್ಕೆ ಸಹಕಾರಿ ಸಂಸ್ಥೆಗಳ ಕೊಡುಗೆ ಅನನ್ಯ

ಕಲಬುರಗಿ,ನ.18: ರಾಷ್ಟ್ರದ ಅನೇಕ ಜನಸಾಮಾನ್ಯರ ಆರ್ಥಿಕ ಜೀವನದ ಸುಗಮ ನಿರ್ವಹಣೆಗೆ ಸಾಕಷ್ಟು ಸಹಾಯಕವಾಗಿ ಸಹಕಾರಿ ಸಂಸ್ಥೆಗಳು ಸೇವೆ ಸಲ್ಲಿಸುತ್ತಿವೆ. ಸಾಲಗಾರರು ಸೂಕ್ತ ಸಮಯಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ತಮ್ಮ ಜೊತೆಗೆ ಸಂಸ್ಥೆಯ ಬೆಳವಣಿಗೆ ಸಾಧ್ಯವಾಗುತ್ತದೆ. ಸಹಕಾರಿ ಸಂಸ್ಥೆಗಳೊಂದಿಗೆ ಸಹಕಾರ ಮತ್ತು ಸಮನ್ವಯತೆ ಸ್ಥಾಪಿಸಿ ಸಂಸ್ಥೆಗಳನ್ನು ಬಲಪಡಿಸಬೇಕು. ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿ ಸಂಸ್ಥೆಗಳ ಕೊಡುಗೆ ಅನನ್ಯವಾಗಿದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಅವರು ನಗರದ ಶಹಾಬಜಾರನಲ್ಲಿರುವ ‘ಶ್ರೀ ಚನ್ನಮಲ್ಲೇಶ್ವರ ಪತ್ತಿನ ಸಹಕಾರ ಸಂಘ’ದಲ್ಲಿ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ‘ಅಖಿಲ ಭಾರತ 67ನೇ ಸಹಕಾರ ಸಪ್ತಾಹ’ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಹಕಾರಿ ಕ್ಷೇತ್ರದ ಪಿತಾಮಹ ಎಸ್.ಎಸ್.ಪಾಟೀಲ ಅವರ ಶ್ರಮ ಮರೆಯುವಂತಿಲ್ಲ. ‘ಪ್ರತಿಯೊಬ್ಬರು ಎಲ್ಲರಿಗಾಗಿ, ಎಲ್ಲರು ಪ್ರತಿಯೊಬ್ಬರಿಗಾಗಿ’ ಎಂಬ ತತ್ವ ಇದರಲ್ಲಿ ಅಡಗಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಲಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು. ಸಹಕಾರಿ ಸಂಸ್ಥೆಗಳ ಬಗ್ಗೆ ವ್ಯಾಪಕವಾದ ಜನಜಾಗೃತಿ ಮೂಡಬೇಕು. ಈ ಕೇತ್ರವನ್ನು ರಾಜಕೀಯ ಮುಕ್ತವಾಗಿ ಬೆಳೆಸಿದರೆ, ಇನ್ನೂ ಹೆಚ್ಚಿನ ಜನರಿಗೆ ಅನಕೂಲವಾಗಲು ಸಾಧ್ಯವಾಗುತ್ತದೆಯೆಂದರು.
ಸಂಘದ ನಿರ್ದೇಶಕ ಸಿದ್ರಾಮಪ್ಪ ಹೊದಲೂರ ಮಾತನಾಡಿ, ಸಹಕಾರಿ ಸಂಸ್ಥೆಗಳ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಇಲ್ಲಿ ವಿಶ್ವಾಸ ಪ್ರಮುಖವಾಗಿದೆ. ಸಾಲ ಮರುಪಾವತಿ ಉತ್ತಮ ರೀತಿಯಿಂದ ಜರುಗಿದರೆ ಸಂಘಗಳು ಬೆಳವಣಿಗೆಯಾಗುತ್ತವೆ. ಈ ನಿಟ್ಟನಲ್ಲಿ ನಮ್ಮ ಸಂಘವು ಉತ್ತಮವಾದ ವ್ಯವಹಾರವನ್ನು ಸಾಗಿಸುವ ಮೂಲಕ ಬ್ಯಾಂಕ್‍ನಂತೆ ಬೃಹತ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆಯೆಂದರೆ ನಮ್ಮ ಆಡಳಿತ ಮಂಡಳಿ ದಕ್ಷ ನಿರ್ವಹಣೆ, ಎಲ್ಲಾ ಸದಸ್ಯರ ಸಹಕಾರದಿಂದ ಸಾಧ್ಯವಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪರಮೇಶ್ವರ ಮುನ್ನಳ್ಳಿ, ಸಂತೋಷ ಡೋಣಿ, ಶಿವಶಂಕರ ಜಾಧವ, ಪ್ರಭುಲಿಂಗ ಗೊಬ್ಬೂರ, ಲಲಿತಾಬಾಯಿ ಅಲ್ಲದ್, ಶಕುಂತಲಾ ಶೋಶೆಟ್ಟಿ, ಶರಣಪ್ಪ ದೇಗಾಂವ, ವೀರೇಶ ಶೀಲವಂತ, ಚನ್ನವೀರ ವಿ.ಪಾಟೀಲ ದಣ್ಣೂರ, ಹಣಮಂತ ಏಕಮೇಕರ್, ಕಾರ್ಯದರ್ಶಿ ಮಹೇಂದ್ರ ಚಿನ್ಮಳ್ಳಿ, ಸಿಬ್ಬಂದಿಗಳಾದ ಪ್ರಭುಶೆಟ್ಟಿ ಭಂಗೂರ, ಶಿವಾನಂದ ಕಲ್ಲೂರ, ಪ್ರೇಮೀಳಾ ಕೋಡದ್, ಆಶ್ವಿನಿ ಯಳವಂತಗಿ, ನಾಗವೇಣಿ ಹೊದಲೂರ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಮಂಗಾಣೆ ಸೇರಿದಂತೆ ಮತ್ತಿತರರಿದ್ದರು.