ರಾಷ್ಟ್ರಕ್ಕೆ ಡಾ.ಬಾಬು ಜಗಜೀವನರಾಮ್ ಕೊಡುಗೆ ಅನನ್ಯ

ಕಲಬುರಗಿ:ಎ.5: ಡಾ.ಬಾಬು ಜಗಜೀವನರಾಮ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಸ್ವಾತಂತ್ರ್ಯನಂತರ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ, ಉಪ ಪ್ರಧಾನಿಯಾಗಿ, ವಿವಿಧ ಖಾತೆಯ ಸಚಿವರಾಗಿ, ರೈತರ, ಶೋಷಿತರ, ಬಡವರಿಗಾಗಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸುವ ಮೂಲಕ ದೇಶ ಕಂಡ ಅಪ್ರತಿಮ ಜನನಾಯಕರಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ದೇವಿ ನಗರದ ಬಿರಾದಾರ ಕಾಂಪೆಕ್ಸ್‍ನಲ್ಲಿರುವ ‘ವಿದ್ಯಾಸಿರಿ ಟ್ಯುಟೊರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧÀವಾರ ಜರುಗಿದ ‘ಡಾ.ಬಾಬು ಜಗಜೀವನರಾಮ್‍ರ 116ನೇ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

   ನಿವೃತ್ತ ಗ್ರಂಥಪಾಲಕ ಎಸ್.ಬಿ.ಮಠ ಮಾತನಾಡಿ, ಜಗಜೀವನರಾಂ ಅವರು ಮೂಲತಃ ಕೃಷಿ ಕುಟುಂಬದವರಾಗಿದ್ದರಿಂದ, ಕೃಷಿಕರ, ಕಾರ್ಮಿಕರ ಪರಿಸ್ಥಿತಿಯನ್ನು ಬಾಲ್ಯದಿಂದಲೇ ಗಮನಿಸಿ, ಮುಂದೆ ಜೀವನದಲ್ಲಿ ರೈತಪರ, ಕಾರ್ಮಿಕರಪರ ಹೋರಾಟ ಮಾಡಲು ಸ್ಪೂರ್ತಿಯಾಯಿತು. ನಿರಂತರವಾದ ಹೋರಾಟದ ಮೂಲಕ ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಶೋಷಿತರ, ರೈತರ, ಕಾರ್ಮಿಕರ ಆಶಾಕಿರಣವಾಗಿ ರಾಷ್ಟ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಸತೀಶ್ ಹತ್ತಿ ಹಾಗೂ ವಿದ್ಯಾರ್ಥಿಗಳಿದ್ದರು.