ರಾಷ್ಟ್ರಕೂಟ ಉತ್ಸವಕ್ಕೆ ಡಾ. ಸಂದೀಪ್ ಆಗ್ರಹ

ಕಲಬುರಗಿ,ಆ.29: ರಾಷ್ಟ್ರಕೂಟ ಉತ್ಸವವನ್ನು ರಾಜ್ಯ ಸರ್ಕಾರವು ಹಮ್ಮಿಕೊಳ್ಳಬೇಕು ಎಂದು ರಂಗ ನಿರ್ದೇಶಕ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಾ. ಸಂದೀಪ್ ಬಿ., ಅವರು ಆಗ್ರಹಿಸಿದ್ದಾರೆ.
ಹಲವು ದಶಕಗಳಿಂದ ಹಿಂದುಳಿದ ಪ್ರದೇಶ ಎಂಬ ಹಣೆ ಪಟ್ಟಿಯಿಂದ ಗುರುತಿಸಿಕೊಂಡ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಎಂಬ ಹೆಸರಿಟ್ಟು ಸರ್ಕಾರ ಕೈತೊಳೆದುಕೊಂಡಂತಿದೆ. ಕೇವಲ ಹೆಸರಿಡುವುದರಿಂದ ಪ್ರದೇಶ ಕಲ್ಯಾಣವಾಗದು ಎಂಬ ಸಾಮಾನ್ಯ ಅರಿವು ಸರ್ಕಾರಕ್ಕೆ ಇಲ್ಲದಿರುವುದು ತುಂಬಾ ಅಸಮಧಾನದ ವಿಷಯ. ಇದನ್ನು ಜನರು ಗಮನಿಸುತ್ತಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕನ್ನಡ ನಾಡಿಗೆ ಮೊಟ್ಟಮೊದಲ ಕನ್ನಡಕೃತಿ “ಕವಿರಾಜ ಮಾರ್ಗ” ನೀಡಿದ ರಾಷ್ಟ್ರಕೂಟ ಕಾಲವನ್ನು ನಾಡಿನ ಜನತೆ ಮರೆಯಲಾರರು. ‘ರಾಷ್ಟ್ರಕೂಟ ಉತ್ಸವ’ ಎಂಬ ಹೆಸರಿನಿಂದ ಇತಿಹಾಸವನ್ನು ಸ್ಮರಿಸುವುದು ಅತಿ ಅವಶ್ಯಕವಾಗಿದೆ. ಹೀಗಾಗಿ ಈ ಹಿಂದೆ ಸರ್ಕಾರ ಕೇವಲ ಒಂದು ಸಲ ಮಾತ್ರ ಉತ್ಸವಆಚರಣೆ ಮಾಡಿತ್ತು. ತರುವಾಯ ಸರ್ಕಾರ ಇದನ್ನು ಗಣನೆಗೆ ತೆಗೆದುಕೊಳ್ಳದಿರುವುದು ವಿಪರ್ಯಾಸ. ಆದಷ್ಟು ಬೇಗ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಸಚಿವ ಸುನೀಲ್‍ಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರಗೇಶ್ ನಿರಾಣಿಯವರು ಗಮನಹರಿಸಿ ‘ರಾಷ್ಟ್ರಕೂಟ ಉತ್ಸವ’ ಆಚರಿಸಲು ಆದೇಶಿಸಬೇಕು. ಆ ಮೂಲಕ ನಮ್ಮ ಪ್ರದೇಶದ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಜನಪದ ಕಲೆಗಳಿಗೆ ಪ್ರೋತ್ಸಾಹಿಸಿ ಹಾಗೂ ನಮ್ಮ ಸಾಂಸ್ಕøತಿಕ ಪರಂಪರೆಯನ್ನು, ಕನ್ನಡ ನಾಡಿನ ಮೇರುಕ್ಷೇತ್ರದಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.