ರಾಷ್ಟ್ರಕೂಟರ ಕುಲದೇವತೆಯ ಪಲ್ಲಕ್ಕಿ ಉತ್ಸವಕ್ಕೆ ಕಂಟಕವಾದ ಕೊರೊನಾ

-ಜಗದೇವ ಎಸ್ ಕುಂಬಾರ

ಚಿತ್ತಾಪುರ:ಅ.31: ಸೀಗಿ ಹುಣ್ಣಿಮೆ ಇಂದು (ಆ.31) ರಂದು ನಡೆಯುತ್ತಿದ್ದ ಇಲ್ಲಿನ ಐತಿಹಾಸಿಕ ಇತಿಹಾಸವನ್ನು ನೆನಪಿಸುವ ನಾಗಾವಿ ಯಲ್ಲಮ್ಮ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವನ್ನು ಕೊರೊನ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸರ್ಕಾರದ ಮಾರ್ಗಸೂಚಿ ಅನ್ವಯ ರದ್ದುಮಾಡಿ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ ಹೀಗಾಗಿ ಸಂಭ್ರಮ ಸಡಗರದಿಂದ ನಡೆಯುತ್ತಿದ್ದ ನಾಗಾವಿ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವಕ್ಕೆ ಕೊರೊನ್ ಸೋಂಕಿನಿಂದ ಕಂಟಕವಾಗಿದೆ.

ಜಾತ್ರೆಯ ಸಂಪ್ರದಾಯದಂತೆ ದೇವಸ್ಥಾನದ ಸ್ವಚ್ಛತೆ ಸುಣ್ಣ-ಬಣ್ಣ ಅಲಂಕಾರದಿಂದ ಭಕ್ತಾದಿಗಳ ಗಮನ ಸೆಳೆಯುತ್ತಿದೆ.ದೇವಿಯ ಗರ್ಭಗುಡಿಯೊಳಗಿರುವ ಅನಗತ್ಯ ವಸ್ತುಗಳನ್ನು ತೆರವು ಮಾಡಿ ದೇವಿಯ ಮೂರ್ತಿಗೆ ನೇರವಾಗಿ ಗರ್ಭಗುಡಿಯೊಳಗೆ ಸೂರ್ಯನ ಕಿರಣಗಳು ನೈಸರ್ಗಿಕವಾಗಿ ಬೆಳಕು ಹರಡುವಂತೆ ಮಾಡಿರುವುದು ಭಕ್ತರಿಗೆ ಸಂತೋಷವುಂಟು ಮಾಡಿದೆ. ಭಕ್ತರೂ ಕಾಯಿ ಕರ್ಪೂರ ಅರ್ಪಿಸಿದ ಅನಗತ್ಯ ತ್ಯಾಜ್ಯವನ್ನು ತೀರ್ಥ ಕುಂಡದಿಂದ ಹರಿಯುವ ನೀರಿನಲ್ಲಿ ಹಾಕದಂತೆ ಕ್ರಮ ಕೈಗೊಳ್ಳಲಾಗಿದೆ.

ಸುಕ್ಷೇತ್ರ ನಾಗಾವಿ ಇತಿಹಾಸದ ಹಿನ್ನೆಲೆ:

ರಾಷ್ಟ್ರಕೂಟರು, ಶಾತವಾಹನರು, ಕಲ್ಯಾಣ ಚಾಲುಕ್ಯರು, ಕಳಚೂರ್ಯರು, ಪ್ರದೇಶದಲ್ಲಿ ಆಳ್ವಿಕೆಯನ್ನು ನಡೆಸಿದ್ದಾರೆ ಈ ಪ್ರದೇಶ ಮಹಮ್ಮದಿಯರ (ಬಹುಮನಿ ಹೈದರಾಬಾದ್ ನಿಜಾಮ್) ಆಳ್ವಿಕೆಗೆ ಒಳಪಟ್ಟಿತ್ತು. ಕಂಪನಿ ಸರ್ಕಾರಗಳು ತಮ್ಮ ಪ್ರಭುತ್ವದ ಪ್ರಾಬಲ್ಯವನ್ನು ಬೀರಿವೆ.

ನಾಗಾವಿಯಲ್ಲಿ ಪ್ರಾಚೀನ ಕಾಲದಿಂದಲೇ ಶೈಕ್ಷಣಿಕ ಪ್ರಗತಿಗೆ ಮೂಲ ನೆಲೆಯಾಗಿತ್ತು ಎನ್ನಬಹುದಾಗಿದೆ ಕ್ರಿ.ಶ 8ನೇ ಶತಮಾನದ ಹೊತ್ತಿಗೆ ರಾಷ್ಟ್ರಕೂಟರ ಕಾಲದಲ್ಲಿ ಅಗ್ರಹಾರವಾಗಿದ್ದ ನಾಗಾವಿಯು 10,11ನೇ ಶತಮಾನದ ಹೊತ್ತಿಗೆ ಚಾಲುಕ್ಯರ ಒಂದನೇ ಸೋಮೇಶ್ವರನ ಕಾಲಕ್ಕೆ ಘಟಿಕಾ ಸ್ಥಾನವಾಗಿತ್ತು ಇದನ್ನು ನಿರ್ಮಿಸಿದವನು ಮಧುವಪ್ಪರಸ ದಂಡನಾಯಕ ನಾಗಾವಿ ಘಟಿಕಸ್ಥಾನದಲ್ಲಿ ಪ್ರಾಚೀನ ಪ್ರೌಢ ವಿದ್ಯೆಯ ಮಹತ್ವದ ಶಾಖೆಗಳನ್ನು ಬೋಧಿಸಲಾಗುತ್ತಿತ್ತು ಈ ವಿಷಯಗಳನ್ನು ಕಲಿಸುವ ಉಪಾಧ್ಯರು ಮತ್ತು ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿತ್ತು ಎಂದು ಶಾಸನಗಳಿಂದ ತಿಳಿದುಬಂದಿದೆ

ರಾಷ್ಟ್ರಕೂಟರು ಮಾನ್ಯಖೇಟವನ್ನು ತಮ್ಮ ರಾಜಧಾನಿಯನ್ನಾಗಿ ಸಿಕೊಂಡಿದ್ದ ಸಂದರ್ಭದಲ್ಲಿ ಈಗಿನ ತಾಲೂಕು ಕೇಂದ್ರ ಸೇಡಂನಲ್ಲಿ ರಾಣಿವಾಸ, ಸಮೀಪದ ನೀಲ ಹಳ್ಳಿಯಲ್ಲಿ ಖಜಾನೆಯು ಇದ್ದರೆ ಚಿತ್ತಾಪುರ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಟಂಕಣಶಾಲೆ, ದಂಡೋತಿ ಯಲ್ಲಿ ಸೈನ್ಯದ ವಾಸಸ್ಥಳ ವಿತ್ತು ಎನ್ನಲಾಗಿದೆ.

ಚಾಲುಕ್ಯ ಅರಸ ಒಂದನೇ ಸೋಮೇಶ್ವರನ ಕಾಲಕ್ಕೆ ಮಹಾಮಂಡಳೇಶ್ವರನಾಗಿದ್ದ ಹೈಹಯ ವಂಶದ ಲೋಕರಸನು ಅರಲು ಮುನ್ನೂರನ್ನು (ತಾಲೂಕಿನ ಅಲ್ಲೂರು ಗ್ರಾಮ) ಆಳುತ್ತಿದ್ದನೆಂದು ಈ ಅರಲು ಮುನ್ನೂರು ವ್ಯಾಪ್ತಿಯಲ್ಲಿ ನಾಗಾವಿ ಪ್ರಸಿದ್ಧ ಅಗ್ರಹಾರವಾಗಿತ್ತು ಎಂದು ತಿಳಿದುಬರುತ್ತದೆ. ನಾಗಾವಿ ಪ್ರದೇಶಕ್ಕೆ ಐತಿಹಾಸಿಕ ಹಿನ್ನೆಲೆಯಿದೆ, ಧಾರ್ಮಿಕ ಪರಂಪರೆ ಇದೆ, ಇಂದು ನಾಗಾವಿ ಪ್ರದೇಶವನ್ನು ಎಲ್ಲಮ್ಮ ದೇವಿಯ ಪುಣ್ಯಕ್ಷೇತ್ರ ವೆಂದು ಮಾತ್ರ ಗುರುತಿಸಲಾಗುತ್ತದೆ. ಹಿಂದೊಮ್ಮೆ ಈ ಪ್ರದೇಶ ಪ್ರಸಿದ್ಧ ವಿದ್ಯಾಕೇಂದ್ರವಾಗಿ ತನ್ನ ಘನತೆ ಗೌರವಗಳಿಂದ ಲೋಕವಿಖ್ಯಾತಿ ಪಡೆದಿದೆ.

ನಾಗಾವಿ ಯಲ್ಲಮ್ಮ ದೇವಸ್ಥಾನ ದಕ್ಷಿಣ ಭಾರತದ ಸುಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲಿ ಒಂದಾಗಿದ್ದು. ರಾಷ್ಟ್ರಕೂಟರ ಅರಸ ಅಮೋಘವರ್ಷ ನೃಪತುಂಗನ ಕುಲದೇವತೆ ಎಂದೇ ಖ್ಯಾತಿ ಪಡೆದಿದ್ದ ನಾಗಾವಿ ಯಲ್ಲಮ್ಮ ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ದೇವತೆಯಾಗಿದ್ದಾಳೆ.

ಪಟ್ಟಣದಿಂದ ಎರಡು ಕಿ.ಮೀ ದೂರದಲ್ಲಿ ಕಲೆ, ಸಾಹಿತ್ಯ, ಶಿಲ್ಪಕಲೆ, ಶಾಸನಗಳಿರುವ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ಪರಂಪರೆ ಹೊಂದಿದ ಈ ಭವ್ಯವಾದ ನಾಗಾವಿ ಯಲ್ಲಮ್ಮ ದೇವಸ್ಥಾನವಿದೆ.ಮುಖ್ಯದ್ವಾರ ಪ್ರವೇಶಿಸಿ ಸ್ವಲ್ಪ ಮುಂದೆ ಹೋದರೆ ನಾಗಶೇಷ ಗುಡಿ ಕಾಣಿಸುತ್ತದೆ ಈ ಗುಡಿಯ ಮುಂದೆ ಯಲ್ಲಮ್ಮ ದೇವಿ ಗರ್ಭಗುಡಿಯಿದೆ ಗುಡಿಯ ಬಲ ಎಡ ಭಾಗದಲ್ಲಿ ಎರಡು ಪುಷ್ಕರಣಿಗಳಿವೆ.

ವಿಶಾಲವಾದ ಪ್ರಾಂಗಣ ಹೊಂದಿರುವ ದೇಗುಲದಲ್ಲಿ ಭಕ್ತಾದಿಗಳಿಗೆ ಚಿತ್ರಗಳನ್ನು ನಿರ್ಮಿಸಲಾಗಿದೆ ದೇವಾಲಯ ತುಂಬಾ ಪುರಾತನವಾದದ್ದು ಸ್ಕಂದ ಪುರಾಣಗಳಲ್ಲಿ ಕಾಣಿಸಿಕೊಳ್ಳುವ ಭಕ್ತರು ಯಲ್ಲಮ್ಮ ದೇವಿ ಆರಾಧಕರಾಗಿದ್ದರು ಎನ್ನುವುದು ಕ್ರಿಶ. ಎರಡನೇ ಶತಮಾನದಲ್ಲಿನ ಮಾಕರ್ಂಡೆಯ ಪುರಾಣದಿಂದ ತಿಳಿದುಬರುತ್ತದೆ.

ಹಾಗೂ ಗುಡಿಯ ಸುತ್ತಲೂ ಇರುವ ಐತಿಹಾಸಿಕ ಸ್ಥಳಗಳಾದ 60 ಕಂಬದ ಗುಡಿ, ಸಿದ್ದೇಶ್ವರ ದೇವಾಲಯ, ಮಧುಸುದಾನ ದೇವಾಲಯ, ಜೈನ ದೇವಾಲಯ, ನಂದಿ ಬಾವಿ, ರಾಮೇಶ್ವರ ದೇವಾಲಯ, ಲಕ್ಷ್ಮಿ ಗಣೇಶ್ವರ ದೇವಾಲಯ, ಹಾಗೂ ಈರಪ್ಪಯ್ಯನ ಗದ್ದುಗೆ, ಸಂಜೀವಿನಿಯ ಆಂಜನೇಯ, ಎಲ್ಲಾ ದೇವಾಲಯಗಳು ಭಕ್ತಜನರ ಕಣ್ಮನ ಸೆಳೆಯುತ್ತಿವೆ.

ಕನ್ನಡ ನಾಡನ್ನು ಆಳಿದ ಚಕ್ರವರ್ತಿಗಳಾದ ಬಾದಾಮಿಯ ಚಾಲುಕ್ಯರು ಬನಶಂಕರಿಯನ್ನು, ಕಲ್ಯಾಣಿ ಚಾಲುಕ್ಯರು ಚಂದ್ರಲಾ ಪರಮೇಶ್ವರಿಯನ್ನು, ವಿಜಯನಗರ ಅರಸರು ಭವನೇಶ್ವರಿಯನ್ನು, ಮೈಸೂರು ಒಡೆಯರು ಚಾಮುಂಡೇಶ್ವರಿಯನ್ನು ತಮ್ಮ ಕುಲದೇವತೆಯಾಗಿ ಪೂಜಿಸುವಂತೆ ರಾಷ್ಟ್ರಕೂಟರು ನಾಗಾವಿ ಯಲ್ಲಮ್ಮ ದೇವಿಯನ್ನು ಪೂಜಿಸುತ್ತಿದ್ದರು.

ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ಹಾಗೂ ರಾಜ್ಯದ ಪ್ರಮುಖ ಜಿಲ್ಲೆಗಳಿಂದ ಹುಣ್ಣಿಮೆ ಅಮಾವಾಸ್ಯೆ ಮತ್ತು ಪ್ರತಿ ಮಂಗಳವಾರ ಶುಕ್ರವಾರ ಭಕ್ತಾದಿಗಳು ಅಪಾರ ಪ್ರಮಾಣದಲ್ಲಿ ಆಗಮಿಸಿ ದರ್ಶನ ಪಡೆಯುತ್ತಾರೆ.


ಕೋವಿಡ್-19 ಮಾರ್ಗಸೂಚಿ ಅನ್ವಯ ದೇವಿಯ ದರ್ಶನಕ್ಕೆ ಅವಕಾಶವಿಲ್ಲ. ತೆಂಗಿನಕಾಯಿ, ನೈವೇದ್ಯ ಅರ್ಪಿಸುವುದು, ದೇವಸ್ಥಾನದ ಎದುರು ಇರುವ ಬಾವಿಯಲ್ಲಿ ಸ್ನಾನ ಮಾಡುವುದು ಮುಂತಾದವುಗಳಿಗೆ ಸಂಪೂರ್ಣ ನಿಷೇಧವಿದೆ. ಭಕ್ತರು ದೇವಸ್ಥಾನಕ್ಕೆ ಬರುವುದನ್ನು ತಡೆಯಲು ಅಗತ್ಯ ಇರುವ ಕಡೆಗೆ ಪೆÇೀಲಿಸ್ ನಾಕಾಬಂಧಿ ವ್ಯವಸ್ಥೆ ಮಾಡಲಾಗಿದೆ.

ಕೊರೋನಾ ನಿಯಂತ್ರಣದ ನಿಯಮ ಪಾಲನೆಯೊಂದಿಗೆ ಸಾಂಪ್ರದಾಯದಂತೆ ದೇವಸ್ಥಾನದಲ್ಲಿ ದೇವಿಯ ಪೂಜೆ ನೆರವೇರಲಿದೆ. ಪಲ್ಲಕ್ಕಿ ಉತ್ಸವದಲ್ಲಿ ಸರಫ್ ಮನೆತನದವರು, ಕೆಲವು ಅಧಿಕಾರಿಗಳು ಮತ್ತು ಪಲ್ಲಕ್ಕಿ ಹೊರುವವರ ಉಪಸ್ಥಿತಿಯಲ್ಲಿ ಪಲ್ಲಕ್ಕಿ ಪೂಜೆ ನೆರವೇರಿಸಲಾಗುವುದು. ಪೂಜೆಯಲ್ಲಿ ಪಾಲ್ಗೊಳ್ಳುವವರು ಕೋವಿಡ್-19 ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಿಸಿಕೊಳ್ಳಬೇಕು. ನೆಗೆಟಿವ್ ಇದ್ದವರಿಗೆ ಮಾತ್ರ ಪ್ರವೇಶವಿದೆ.

ಜಾತ್ರೆಯ ದಿನ ದೇವಸ್ಥಾನದ ಹತ್ತಿರ ಯಾವುದೇ ಅಂಗಡಿಗಳು ಇರುವುದಿಲ್ಲ. ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗುವುದು. ಯಾರೂ ಪ್ರಸಾದ ಮತ್ತು ಪಾನೀಯಗಳ ವಿತರಣೆ ಮಾಡಬಾರದು ಎಂದು ತಿಳಿಸಿದರು.

  • ಉಮಾಕಾಂತ್ ಹಳ್ಳೆ

ತಹಸಿಲ್ದಾರರು ಚಿತ್ತಾಪುರ.


ರಾಜ್ಯ ಸರ್ಕಾರವು ಹಂಪಿ ಉತ್ಸವ, ಬಾದಾಮಿ ಉತ್ಸವ, ಮಾನ್ಯಖೇಡ್ ಉತ್ಸವ, ಹೀಗೆ ಇತರ ಉತ್ಸವಗಳಂತೆ ಇಲ್ಲಿನ ಐತಿಹಾಸಿಕ ನಾಗಾವಿ ಕ್ಷೇತ್ರಕ್ಕೆ ಸರ್ಕಾರದ ವತಿಯಿಂದ ಉತ್ಸವವನ್ನು ಆಚರಿಸಿದಲ್ಲಿ ನಶಿಸಿ ಹೋಗುತ್ತಿರುವ ಅಪಾರ ಜ್ಞಾನ ಬಂಡಾರ ಶಿಲಾ ಶಾಸನಗಳು ಗ್ರಾಮೀಣ ಸೂಡಗಿನ ಕಲಾಕೃತಿಗಳು ಹೊರಬಂದು ಮುಂದಿನ ಪೀಳಿಗೆಗೆ ದಾರಿದೀಪವಾಗುವುದು ಹೀಗಾಗಿ ಸರ್ಕಾರ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

-ಮಲ್ಲಿಕಾರ್ಜುನ್ ಅಲ್ಲೂರಕರ್

ಕರವೇ ತಾಲೂಕು ಅಧ್ಯಕ್ಷ ಚಿತ್ತಾಪುರ.