ರಾಷ್ಟೀಯ ಹೆಣ್ಣು ಮಕ್ಕಳ ದಿನಾಚಾರಣೆ ಕಾರ್ಯಕ್ರಮ

ಬೀದರ:ನ.6: ರಾಷ್ಟೀಯ ಹೆಣ್ಣು ಮಕ್ಕಳ ದಿನಾಚಾರಣೆ ಕಾರ್ಯಕ್ರಮವು ಬೀದರನ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ನವೆಂಬರ್ 5ರಂದು ನಡೆಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸರಕಾರಿ ಬಾಲಕಿಯರ ಬಾಲಮಂದಿರ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿದ್ರಾಮ ಟಿ.ಪಿ. ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಲಿಂಗತಾರತಮ್ಯ ಎಲ್ಲಿವರೆಗೂ ಇರುತ್ತದೆಯೋ ಅಲ್ಲಿವರೆಗೆ ಹೆಣ್ಣು ಮಕ್ಕಳಿಗೆ ಗೌರವ ಸಿಗುವುದಿಲ್ಲ. ನಾವು ಹೆಣ್ಣು ಮಕ್ಕಳ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು. ಅವರ ಕನಸುಗಳನ್ನು ಸಹಕಾರಗೊಳಿಸಲು ಅವರಿಗೆ ಅವಕಾಶಗಳನ್ನು ನೀಡಬೇಕು. ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಜೀವನ ನಡೆಸಬೇಕು. ಕರ್ನಾಟಕ ರಾಜ್ಯ ಹೆಣ್ಣು ಮಕ್ಕಳ ನೀತಿಯ ಪ್ರಕಾರ ನಾವೆಲ್ಲರೂ ಕಾರ್ಯನಿರ್ವಹಿಸಬೇಕಾಗಿದೆ. ಸರಕಾರಿ ಬಾಲಕಿಯರ ಬಾಲಮಂದಿರದ ಮಕ್ಕಳು ಚೆನ್ನಾಗಿ ಓದಬೇಕು. ತಮಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ನಾವು ಒದಗಿಸಿಕೊಡುತ್ತೇವೆ. ಇದರ ಸದುಪಯೋಗವನ್ನು ಪಡೆದುಕೊಂಡು ಸಮಾಜದ ಉತ್ತಮ ಪ್ರಜೆಯಾಗಿ ಹೊರಬರಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ತಿಪ್ಪಣ್ಣ ಸಿರಸಗಿ ಅವರು ಮಾತನಾಡಿ, ಮಕ್ಕಳು ದೇಶದ ಆಸ್ತಿ. ಅವರನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಕೇವಲ ಅಕ್ಟೋಬರ್ 11ರಂದು ಮಾತ್ರ ಹೆಣ್ಣು ಮಕ್ಕಳ ದಿನಾಚಾರಣೆಯನ್ನು ಆಚರಿಸಿದರೇ ಸಾಲದು. ದಿನನಿತ್ಯ ಶಾಲೆ, ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಗೌರವವನ್ನು ನೀಡುತ್ತಾ ಅವರನ್ನು ರಕ್ಷಣೆ ಮಾಡುತ್ತಿರಬೇಕು. ಇಂದಿನ ದಿನಮಾನದಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತ ಕುಸಿಯುತ್ತಿದ್ದು, ಇದರಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇದಕ್ಕಾಗಿಯೇ ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆಯನ್ನು ಜಾರಿಗೆ ತಂದಿರುತ್ತಾರೆ. ಬಾಲಮಂದಿರದಲ್ಲಿ ಮಕ್ಕಳ ಪ್ರವೇಶ ನೋಂದಣಿಯ ಸಂದರ್ಭದಲ್ಲಿ ನಾವು ಅವರನ್ನು ಸಂಭ್ರಮದಿಂದ ಸ್ವಾಗತಿಸಿಕೊಳ್ಳಬೇಕು. ಅವರಿಗೆ ಸಿಗುವ ಎಲ್ಲಾ ಸೌಕರ್ಯಗಳನ್ನು ಒದಗಿಸಬೇಕು. ಇಂತಹ ಸುಧಾರಣಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಪುಣ್ಯವಂತರು. ಏಕೆಂದರೆ ಇಂತಹ ಸೇವೆ ಎಲ್ಲರಿಗೂ ಸಿಗುವುದಿಲ್ಲ. ಇಂತಹ ಮಕ್ಕಳ ಸೇವೆಯನ್ನು ಮಾಡಿದರೇ ದೇವರಿಗೆ ಪೂಜೆ ಸಲ್ಲಿಸಿದಂತೆ. ಹೆಣ್ಣು ಮಕ್ಕಳಿಗೂ ಸಹ ಆಸ್ತಿಯಲ್ಲಿ ಪಾಲು ನೀಡಬೇಕು. ಈ ಕಾರ್ಯ ನಮ್ಮಿಂದಲೇ ಪ್ರಾರಂಭವಾದರೇ ಬೇರೆಯವರು ಕೂಡ ಇದನ್ನು ಅನುಷ್ಠಾನಗೊಳಿಸುತ್ತಾರೆ ಎಂದು ತಿಳಿಸಿದರು.
ಸರಕಾರಿ ಬಾಲಕರ ಬಾಲಮಂದಿರ ಅಧೀಕ್ಷಕರಾದ ಶ್ರೀನಿವಾಸ ಅವರು ಉಪಸ್ಥಿತರಿದ್ದರು. ರಾಣಿ ಅವರು ಪ್ರಾರ್ಥಿಸಿದರು. ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪೂರೆ ನಿರೂಪಿಸಿದರು. ಅಧೀಕ್ಷಕಿ ರೂಪಾ ಸ್ವಾಗತಿಸಿದರು. ಸರಕಾರಿ ಬಾಲಕಿಯರ ಬಾಲಮಂದಿರ ಆಪ್ತ ಸಮಾಲೋಚಕಿ ಶಿಲ್ಪಾ ವಂದಿಸಿದರು.