ರಾಶಿ ರಾಶಿ ಕಡಲೆಕಾಯಿ
ಗ್ರಾಮೀಣ ಸೊಬಗು ಅನಾವರಣ

ಬೆಂಗಳೂರು, ನ.೨೦- ಎತ್ತ ನೋಡಿದರೂ ರಾಶಿ ರಾಶಿ ಕಡಲೆಕಾಯಿ. ಕಾರ್ತಿಕ ಮಾಸದ ಕಡೆಯ ಸೋಮವಾರದಂದು ನಡೆಯಲಿರುವ ಬಸವನಗುಡಿಯಲ್ಲಿ ವಾರ್ಷಿಕ ಕಡಲೆಕಾಯಿ ಪರಿಷೆಗೆ ಇಂದಿನಿಂದಿ ಮೂರು ದಿನಗಳ ಕಾಲ ಬುಲ್ ಟೆಂಪಲ್ ರಸ್ತೆಯಲ್ಲಿ ಗ್ರಾಮೀಣ ಸೊಬಗು ಅನಾವರಣಗೊಳ್ಳಲಿದೆ.
ಲಕ್ಷಾಂತರ ಜನರು ಈ ಕಡಲೆಕಾಯಿ ಪರಿಷೆಗೆ ಆಗಮಿಸಲಿದ್ದು, ಭರ್ಜರಿ ವ್ಯಾಪಾರ ನಡೆಯಲಿದೆ. ಈ ಬಾರಿ ಥೀಮ್ ಪಾರ್ಕ್ ನಿರ್ಮಿಸಿದ್ದು ಪರಿಷೆಯ ಪ್ರಮುಖ ಆಕರ್ಷಣೆಯಾಗಿದೆ.
ಇಲ್ಲಿನ ದೊಡ್ಡ ಗಣಪತಿ ದೇವಸ್ಥಾನದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾಮ್ರಾಟ್, ಗಡಂಗ್, ಬಾದಾಮಿಯಂತಹ ಹತ್ತಾರು ಬಗೆಯ ಕಡಲೆ ಕಾಯಿಗಳು ಬಂದಿದ್ದು, ರುಚಿ ಮತ್ತು ಗಾತ್ರದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿದೆ. ಕೆಲವು ಮೂರು ಬೀಜದ ಕಾಯಿಗಳಾದರೆ, ಮತ್ತೆ ಕೆಲವು ಎರಡು, ಮತ್ತೆ ಕೆಲವು ಕಾಯಿಗಳು ಒಂದು ಬೀಜದೊಂದಿಗೆ ಕಡಲೆ ಕಾಯಿ ಪ್ರಿಯರನ್ನು ಸೆಳೆಯುತ್ತಿವೆ.
ಅಷ್ಟೇ ಅಲ್ಲದೆ, ಕೆಂಪು ಮಣ್ಣು, ಕಪ್ಪು ಮಣ್ಣಿನಲ್ಲಿ ಬೆಳೆದ ಕಡಲೆ ಕಾಯಿಗಳೂ ಜನರನ್ನು ಆಕರ್ಷಿಸುತ್ತಿದ್ದು ಮೊದಲ ದಿನವೇ ಭರ್ಜರಿ ವಹಿವಾಟು ಕಂಡು ಬಂದಿದೆ.
ತುಲಾಭಾರ: ಇಂದು ಸಂಜೆ ೬ ಗಂಟೆ ಸುಮಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತುಲಾಭಾರ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಿದ್ದಾರೆ.
ಸತತ ಮೂರು ದಿನಗಳ ಕಾಲ ಪರಿಷೆ ಜರುಗಲಿದ್ದು, ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಲಕ್ಷಾಂತರ ಜನರ ಭೇಟಿ ನೀಡಿ ಗ್ರಾಮೀಣ ಸೊಬಗನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಅದೇ ರೀತಿ, ಬ್ಯೂಗಲ್ ರಾಕ್ ಉದ್ಯಾನವನದಲ್ಲಿ ಸಂಜೆ ೬ರಿಂದ ೭.೩೦ರವರೆಗೆ ಶ್ರೀ ಶ್ರೀಧರ್ ಸಾಗರ ರವರಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ ನಡೆಯಲಿದೆ. ಸೋಮವಾರ ಸಂಜೆ ೬ ರಿಂದ ೭.೩೦ರವರೆಗೆ ಶ್ರೀಮತಿ ರಂಗಲಕ್ಷ್ಮೀ ಶ್ರೀನಿವಾಸ್ ಅವರಿಂದ ಬೀದಿ ನಾಟಕ ನಡೆಯಲಿದೆ.
ಅಲ್ಲದೆ ನರಸಿಂಹಸ್ವಾಮಿ ಉದ್ಯಾನವನದಲ್ಲಿ ಸಂಜೆ ೬ ರಿಂದ ೭.೩೦ರ ವರೆಗೆ ಶ್ರೀಮತಿ ವೀಣಾ ಮುರಳಿಧರ್ ರವರ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ನ. ೨೨ ರಂದು ವಿಜಯ ವಿಠ್ಠಲ ಶಾಲೆಯ ವತಿಯಿಂದ ವೈವಿದ್ಯಮಯ ಸಾಂಸ್ಕೃತಿಕ ಸಂಜೆ ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಲಿದೆ.
ತುರ್ತು ಸಂದರ್ಭದಲ್ಲಿ ಮಕ್ಕಳು, ವೃದ್ಧರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹಾಗೇ, ವ್ಯಾಪಾರಸ್ಥರಿಗೆ ಸುಮಾರು ೨ ಸಾವಿರ ತಾತ್ಕಾಲಿಕ ಅಂಗಡಿಗಳನ್ನು ತೆರೆಯಲು ಪಾದಚಾರಿ ಬದಿಯಲ್ಲಿ ಟ್ರಾಫಿಕ್ ಸಮಸ್ಯೆ ಇಲ್ಲದೆ ಅನುಕೂಲವನ್ನು ಕಲ್ಪಿಸಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಸುಮಾರು ೫೦೦ ರಿಂದ ೬೦೦ ಪೋಲೀಸ್ ಇಲಾಖೆ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗಿದೆ.
ಎಲ್ಲಿಂದ ಬಂತು ಕಡಲೆಕಾಯಿ..!
ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಕಡಲೆಕಾಯಿ ಆಗಮಿಸಿದ್ದರೆ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದಲೂ ಬರಲಿವೆ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಈಗಾಗಲೇ ಕೊಯ್ಲು ಮಾಡಿರುವವರಿಗೆ ಬೆಳೆಯಿಂದ ಒಂದಷ್ಟು ಹಣ ಸಿಗುತ್ತದೆ.
ಸೇರು..೫೦ ರೂ..!
ಪರಿಷೆಯಲ್ಲಿ ತಿಂಡಿ-ತಿನಿಸು, ಬಣ್ಣ ಬಣ್ಣದ ಬಲೂನು, ಬಗೆ ಬಗೆಯ ಆಟಿಕೆ, ಅಲಂಕಾರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳನ್ನು ಮಾರುವ ಮಳಿಗೆಗಳು ಸಹ ಜನರನ್ನು ಸೆಳೆಯುತ್ತಿವೆ. ಕೆಲವು ವ್ಯಾಪಾರಿಗಳು ಒಂದು ದೊಡ್ಡ ಸೇರು ಹಸಿ ಕಡಲೆಕಾಯಿಗೆ ೫೦ ಮತ್ತು ಸಣ್ಣ ಸೇರು ಕಡಲೆಕಾಯಿಗಳನ್ನು ೨೫ ರೂ.ಗಳಿಗೆ ಮಾರಾಟ ಮಾಡಿದರು.
ಪ್ಲಾಸ್ಟಿಕ್ ನಿಷೇಧ
ಪರಿಷೆಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಜನರು ಪೇಪರ್ ಬ್ಯಾಗ್ ಅಥವಾ ಬಟ್ಟೆ ಚೀಲಗಳನ್ನು ತರಬೇಕು ಎಂದು ಬಿಬಿಎಂಪಿ ಮನವಿ ಮಾಡಿದೆ.