ರಾವೂರ: ಕುಡಿಯುವ ನೀರಿಗಾಗಿ ಹಾಹಾಕಾರ

ಮಲಿಕಪಾಶಾ ಮೌಜನ್

ವಾಡಿ:ನ.12: ಕಳೆದ ತಿಂಗಳು ಸುರಿದ ಧಾರಾಕಾರ ಮಳೆಯಿಂದ ಬೆಳೆಗಳು ಜಲಾವೃತ್ತ್‍ವಾದುವು. ನದಿಗೆ ಹೊಂದಿಕೊಂಡಿರುವ ಬ್ರೀಜ್‍ಗಳು ಮುಳುಗಿದರ ಪರಿಣಾಮವಾಗಿ ಜನರು ಸಂಚಾರಕ್ಕಾಗಿ, ದವಸಧಾನ್ಯ ನೀರು ಪಾಲಾಗಿ ಪರದಾಡಿದರು. ಒಂದು ತಿಂಗಳು ಕಳೆದರು ಜನರಿಗೆ ಕುಡಿಯುವ ನೀರು ಲಭ್ಯವಾಗದೇ ಪ್ರತಿನಿತ್ಯ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಜನರು ಪಂಚಾಯತ ಅಲೆಯುತ್ತಿದ್ದಾರೆ.

ಹೌದು ಇಂತಹದೊಂದು ಸಮಸ್ಯೆ ಇರುವುದು ಚಿತ್ತಾಪೂರ ತಾಲ್ಲೂಕಿನ ರಾವೂರ ಗ್ರಾಮದಲ್ಲಿ. ಕಳೆದ ತಿಂಗಳ ಹಿಂದೆ ಸುರಿಧ ಬಾರಿ ಮಳೆಯ ಪರಿಣಾಮವಾಗಿ ಶಹಾಬಾದ್ ಸಮೀಪದ ಕಾಗಿಣಾ ಸೇತುವೆ ಸಂಪೂರ್ಣ ನೀರು ಪಾಲಾಗಿತ್ತು. ಅಲ್ಲಿಂದ ರಾವೂರ ಗ್ರಾಮಕ್ಕೆ ನೀರು ಸರಬರಾಜು ಆಗುವ ಪೈಪ್‍ಗಳೆಲ್ಲಾ ಒಡೆದು ಚಲ್ಲಾಪಿಲ್ಲಿಯಾಗಿವೆ. ಕಳೆದ ಒಂದು ತಿಂಗಳಿನಿಂದ ಜನರಿಗೆ ಕುಡಿಯುವ ನೀರು ಸರಿಯಾಗಿ ಪೂರೈಕೆ ಆಗದೆ ಜನರು ಕೊಡಗಳನ್ನು ಹಿಡಿದುಕೊಂಡು ಅಲೇದಾಡುತ್ತಿದ್ದಾರೆ.

ಶಹಾಬಾದ ಕಾಗಿಣಾ ನದಿಯಿಂದ ರಾವೂರ ಗ್ರಾಮಕ್ಕೆ ನೀರು ಸರಬರಾಜು ಆಗುತ್ತದೆ. ಆದರೆ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದರು, ಜನರಿಗೆ ಸಾಲುತ್ತಿಲ್ಲ ಎನ್ನುವ ಆರೋಪ ಗ್ರಾಮಸ್ಥರದ್ದಾಗಿದೆ. ಕಾಗಿಣಾ ನದಿಯಿಂದ ಮಧ್ಯಮ ವರ್ಗದ ಕಾಲೋನಿ ಜನರಿಗೆ ಪೈಪ್ ದುರಸ್ಥಿ ಮಾಡಿ ಅಧಿಕಾರಿಗಳು ನೀರು ಸರಬರಾಜು ಮಾಡುತ್ತಿದ್ದಾರೆ. ಆದರೆ, ಗ್ರಾಮೀಣ ಜನರಿಗೆ ನಿರ್ಲಕ್ಷ್ಯ ಮಾಡಿ ನೀರಿಗೆ ಪರದಾಡುವಂತೆ ಮಾಡಿದ್ದಾರೆ ಎಂದು ಬಹುತೇಕರು ಕೂಡಾ ಆರೋಪಿಸಿದ್ದಾರೆ. ಚುನಾಯಿತ ಸದಸ್ಯರು ಇಲ್ಲದ ಕಾರಣ ಯಾರಿಗೇ ಸಮಸ್ಯೆ ಹೇಳಿಕೊಳ್ಳಬೇಕೆಂದು ತಿಳಿಯದೇ ಜನರು ಸಿಕ್ಕ, ಸಿಕ್ಕ ಜನರಿಗೆ ನೀರಿಗಾಗಿ ಬಾಯಿ ಬೀಡುತ್ತಿದ್ದಾರೆ. ಆದರೆ, ಯಾರು ಕೂಡಾ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕೇವಲ ಸದಸ್ಯರಾಗಿದ್ದಾಗ ಮಾತ್ರ ಸಮಸ್ಯೆಗೆ ಕಿವಿಗೊಡಬೇಕಾ? ಮಾನವೀಯತೆ ದೃಷ್ಠಿಯಿಂದ ಸಮಸ್ಯೆ ಅರಿತು ಚರ್ಚೆ ಮಾಡುವ ಮನಸು ಮಾಡಬೇಕಿದೆ. ತಹಸೀಲ್ದಾರ್‍ರು, ತಾಲ್ಲುಕ ಕಾರ್ಯನಿರ್ವಾಹಕ ಅಧಿಕಾರಿ, ನೇಮಕ ಆಡಳಿತ ಅಧಿಕಾರಿ, ಪಿಡಿಓ ಸಂಬಂಧಪಟ್ಟ ಅಧಿಕಾರಿಗಳು ಜನರ ಕಷ್ಟಕ್ಕೆ ಶಾಶ್ವತ ಪರಿಹಾರ ಒದಗಿಸಬೇಕಿದೆ.