ರಾವಿವಿಯಿಂದ ಸಮಾಜಕಾರ್ಯ ಶಿಬಿರ

ರಾಯಚೂರು,ಆ.೦೧- ರಾಯಚೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದಿಂದ ಏಳು ದಿನಗಳ ಸಮಾಜಕಾರ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ಇತ್ತೀಚೆಗೆ ತಾಲ್ಲೂಕಿನ ಗೋನವಾರ ಗ್ರಾಮದಲ್ಲಿ ಶಿಬಿರದ ಉದ್ಘಾಟನೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಈರಮ್ಮ ಗೋವಿಂದು, ಸಮಾಜಕಾರ್ಯದ ವಿದ್ಯಾರ್ಥಿಗಳಾದ ನೀವು ಗ್ರಾಮಗಳ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಕೊಡಲು ಅಧ್ಯಯನ ಮಾಡಬೇಕು. ತಮ್ಮ ಪದವಿ ಶಿಕ್ಷಣವನ್ನು ಕೇವಲ ಅಂಕಗಳಿಗೆ ಮಾತ್ರ ಸೀಮಿತಗೊಳಿಸದೇ, ಮೌಲ್ಯಯುತ ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಕಿವಿಮಾತು ಹೇಳಿದರು.
ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪನ್ಯಾಸಕ ಡಾ. ಶರಣಬಸವರಾಜ್ ಮಾತನಾಡಿ, ಈ ರೀತಿಯ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕೆ ಹೊಳಪು ನೀಡಲು ಸಹಕಾರಿಯಾಗಿವೆ. ಶಿಬಿರಾರ್ಥಿಗಳು ಗ್ರಾಮ ಜನರ ಜೀವನ ಹಾಗೂ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವ ಉದ್ದೇಶದಿಂದ ಸಂಶೋಧನ ಕಾರ್ಯಗಳನ್ನು ಮಾಡಬೇಕು. ಆಯಾ ಗ್ರಾಮಗಳಿಗೆ ಅಗತ್ಯವಾಗಿರುವ ಸವಲತ್ತುಗಳನ್ನು ಗುರುತಿಸಿ, ಸರ್ಕಾರ ಹಾಗೂ ಸಂಘ-ಸಂಸ್ಥೆಗಳ ಸಹಾಯದಿಂದ ವಿಶೇಷ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜರುಗಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಜಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿದ್ಯಾರ್ಥಿಗಳಾದ ಮಹೇಶ್ ನಿರೂಪಿಸಿದರು ಮತ್ತು ಬಾಲರಾಜ್ ಸ್ವಾಗತಿಸಿದರು. ವಿಭಾಗದ ಉಪನ್ಯಾಸಕಿ ಡಾ. ರಶ್ಮಿರಾಣಿ ಅಗ್ನಿಹೋತ್ರಿ, ಗ್ರಾಪಂ ಸದಸ್ಯರಾದ ಸುರೇಶ್, ನಲ್ಲಾರೆಡ್ಡಿ, ಈರೇಶ್ ಹಾಗೂ ಗ್ರಾಪಂ ಮಾಜಿ ಸದಸ್ಯ ಹನುಮಂತಪ್ಪ ಸೇರಿದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.