ರಾಯ್‌ಬರೇಲಿ ಮೇಲೆ ಕಣ್ಣಿಟ್ಟ ಬಿಜೆಪಿ

ಲಕ್ನೋ, ಡಿ.೨೮- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಯಲ್ಲಿರುವ ರಾಯ್‌ಬರೇಲಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಕಸಿದುಕೊಳ್ಳಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ.
೨೦೧೯ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರತಿನಿಧಿಸಿದ್ದ ಅಮೇಥಿ ಕ್ಷೇತ್ರವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಮುಂದಿನ ಗುರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಪ್ರತಿನಿಧಿಸುತ್ತಿರುವ ರಾಯ್‌ಬರೇಲಿ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದಾಗಿ ತಿಳಿಸಿದರು.
ಮೂರು ದಿನಗಳ ಕಾಲ ಅಮೇಥಿ ಕ್ಷೇತ್ರಕ್ಕೆ ಭೇಟಿ ಕೈಗೊಂಡು ರಾಯ್‌ಬರೇಲಿಗೂ ಭೇಟಿ ನೀಡಿರುವ ಸಂದರ್ಭದಲ್ಲಿ ಲಕ್ನೋದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿದರೆ, ೨೦೨೪ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿ ಕ್ಷೇತ್ರವನ್ನು ಕಸಿದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನೂತನ ಕೃಷಿ ಕಾಯ್ದೆಗಳ ಬಗ್ಗೆ ದ್ವಿಮುಖ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು ಬಹಿರಂಗ ಚರ್ಚೆಗೆ ಬರಲು ಪ್ರಿಯಾಂಕಾ ಗಾಂಧಿ ಕುಟುಂಬಕ್ಕೆ ಹೆದರಿಕೆ ಏಕೆ ಎಂದು ಪ್ರಶ್ನಿಸಿದರು.
ಈ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕರು, ಸ್ಮೃತಿ ಇರಾನಿ ಮತ್ತು ಅವರ ಕುಟುಂಬದ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಮೊದಲು ಪ್ರತಿಕ್ರಿಯಿಸಿರುವಂತೆ ಸವಾಲು ಹಾಕಿದ್ದಾರೆ.
ಈ ಆರೋಪಗಳಿಗೆ ಸ್ಪಷ್ಟ ಉತ್ತರ ನೀಡುವ ತನಕ ಅವರು ಕಾಂಗ್ರೆಸ್ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ದೀಪಕ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.