ರಾಯರ 349ನೇ ಆರಾಧನಾ ಆರಂಭ

ರಾಯಚೂರು.ಆ.02- ಇಂದಿನಿಂದ ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ.
ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಅರ್ಚಕರೆಲ್ಲ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವ ಸೂಚನೆಗಳೊಂದಿಗೆ ಇಂದಿನಿಂದ ಆಗಸ್ಟ್​8 ರವರೆಗೆ ಸಪ್ತರಾತ್ರೋತ್ಸವ ನಡೆಯಲಿದೆ. ಇಂದು ಮುಂಜಾನೆಯಿಂದ ನಿರ್ಮಲ ವಿಸರ್ಜನೆ, ವಿಶೇಷ ಪೂಜೆ ಆರಂಭವಾಗಿದ್ದು, ಸಂಜೆ ಧ್ವಜಾರೋಹಣ, ದಾಸವಾಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಗಷ್ಟ್ 4 ಕ್ಕೆ ಪೂರ್ವಾರಾಧನೆ, 5 ಕ್ಕೆ ಮಧ್ಯಾರಾಧನೆ ಹಾಗೂ 6 ರಂದು ಉತ್ತರ ಆರಾಧನೆ ‌ನಡೆಯಲಿದೆ.
ಈ ಬಾರಿ ಕೊರೊನಾ ಹಿನ್ನೆಲೆ ಸರಳವಾಗಿ ಆರಾಧನಾ ಮಹೋತ್ಸವ ಮಾಡಲಾಗುತ್ತಿದೆ. ಮಠದ ಸೀಮಿತ ಅರ್ಚಕರು, ಸ್ವಾಮೀಜಿಗಳಿಂದ ಸಾಂಪ್ರದಾಯಿಕವಾಗಿ ಆರಾಧನೆಯನ್ನು ಮಾಡಲಾಗುತ್ತದೆ. ಭಕ್ತರು ಆರಾಧನೆಯ ಎಲ್ಲಾ ಕಾರ್ಯಕ್ರಮಗಳನ್ನು ಯೂಟ್ಯೂಬ್‌ನಲ್ಲಿ ನೇರವಾಗಿ ವೀಕ್ಷಿಸಲು ಅವಕಾಶ ಮಾಡಲಾಗಿದೆ ಎಂದು ಮಠದಿಂದ ಪ್ರಕಟಣೆ ಹೊರಡಿಸಲಾಗಿದೆ. ಭಕ್ತರು ಯೂಟ್ಯೂಬ್ ಚಾನಲ್ http;//www.Youtube.com/MantralayaVahiniನಲ್ಲಿ ಆರಾಧನೆ ವೀಕ್ಷಿಸಬಹುದು.