ರಾಯರ ಮಠ : ಉರುಳಿ ಬಿದ್ದ ೨೫೦ ವರ್ಷದ ಜಮ್ಮಿ ಮರ

ರಾಯಚೂರು.ಜು.೨೫- ಮಂತ್ರಾಲಯ ಮಠದಲ್ಲಿರುವ ಸುಮಾರು ೨೫೦ ವರ್ಷಗಳ ಹಳೆಯ ಮರ ಉರುಳಿ ಬಿದ್ದ ಘಟನೆ ನಿನ್ನೆ ಶ್ರೀಮಠ ಆವರಣದಲ್ಲಿ ನಡೆಯಿತು. ಶ್ರೀಮಠ ಪ್ರಾಂಗಣದಲ್ಲಿ ೨೫೦ ವರ್ಷಗಳ ಪುರಾತನ ಈ ಜಮ್ಮಿ ಮರ ನಿತ್ಯ ನಿರಂತರ ಪೂಜೆಗೆ ಒಳಪಡುತ್ತಿತ್ತು. ನಿನ್ನೆ ಆದಿವಾರ ರಜಾ ದಿನ ಹಿನ್ನೆಲೆಯಲ್ಲಿ ರಾಯರ ದರ್ಶನಕ್ಕೆ ರಾಜ್ಯ ವಿವಿಧ ಭಾಗಗಳಿಂದ ಅನೇಕ ಭಕ್ತಾದಿಗಳು ಆಗಮಿಸಿದ್ದರು. ಮಧ್ಯಾಹ್ನ ಮರ ಬಿದ್ದ ಸಮಯದಲ್ಲಿ ಮರದ ಅಕ್ಕಪಕ್ಕದಲ್ಲಿ ಯಾರು ಇಲ್ಲದಿರುವುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಬೃಹತ್ ಗಾತ್ರದ ಈ ಮರ ಬಿದ್ದ ಸದ್ದಿಗೆ ಅಲ್ಲಿಯ ಭಕ್ತರು ಕಕ್ಕಾಬಿಕ್ಕಿಯಾಗಿದ್ದರು. ಎರಡುವರೆ ಶತಮಾನಗಳಿಂದ ಈ ಮರ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬರುವ ಭಕ್ತರಿಂದ ಪೂಜಿಸಲಾಗುತ್ತಿತ್ತು. ರಾಯರ ಮಠದಲ್ಲಿ ಭಕ್ತರಿಂದ ಪೂಜೆಗೊಳಪಡುತ್ತಿದ್ದ ಈ ಮರ ನಿನ್ನೆ ಉರುಳಿ ಬಿದ್ದ ನಂತರ ವೃಕ್ಷಕ್ಕೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ನಂತರ ಶ್ರೀಮಠದ ಭಕ್ತರು ಹಾಗೂ ಸಿಬ್ಬಂದಿ ವರ್ಗದ ಸಹಾಯದಿಂದ ಬೃಹತ್ ಮರವನ್ನು ಅಲ್ಲಿಂದ ತೆರವುಗೊಳಿಸಲಾಯಿತು.