ರಾಯರ ಕೃಪೆಯಿಂದ ಕೊರೊನಾ ಗೆದ್ದ ನಟ ಕೋಮಲ್

ಬೆಂಗಳೂರು,ಏ.೨೮- ನಟ ಕೋಮಲ್ ಗೆ ಕೊರೋನಾ ಸೋಂಕು ತಗುಲಿ ರಾಯರ ಕೃಪೆಯಿಂದ ಪಾರಾಗಿರುವ ವಿಷಯವನ್ನು ಅವರ ಸಹೋದರ ಜಗ್ಗೇಶ್ ತಡವಾಗಿ ಬಹಿರಂಗಪಡಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್ ಗುರುರಾಯರಿಗೆ ಧನ್ಯವಾದ ಅರ್ಪಿಸಿದ್ದಾರೆ. ರಾಯರ ಪವಾಡದಿಂದ ತಮ್ಮ ಬದುಕಿದ ಎಂದಿರುವ ಕೋಮಲ್ ಕೊರೋನಾ ಗೆದ್ದ ಸತ್ಯ ಬಿಚ್ಚಿಟ್ಟಿದ್ದಾರೆ.
ಕೋಮಲ್ ಆರೋಗ್ಯ ಸ್ಥಿತಿ ಗಂಭೀರವಾಗಿರುವ ವಿಚಾರವನ್ನು ನಟ ಜಗ್ಗೇಶ್ ಇಷ್ಟು ದಿನ ಬಹಿರಂಗ ಪಡಿಸಿರಲಿಲ್ಲ. ಈಗ ಕೋಮಲ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ಇದರಿಂದ ತಮ್ಮ ಮನದಾಳದ ಮಾತುಗಳನ್ನು ನಟ ಜಗ್ಗೇಶ್ ಹಂಚಿಕೊಂಡಿದ್ದಾರೆ. ಜೊತೆಗೆ ಸಾವಿನ ದವಡೆಯಿಂದ ತನ್ನ ತಮ್ಮನನ್ನು ಪಾರು ಮಾಡಿದ ರಾಯರಿಗೆ ಅವರು ಮನದಾಳದ ಕೃತಜ್ಞತೆ ಸಲ್ಲಿಸಿದ್ದಾರೆ.
ನಾನು ಇಷ್ಟು ದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ ಮಾತ್ರ ಗೊತ್ತು. ಭಕ್ತನ ಗುರುಗಳ ನಡುವೆ ನಡೆದಿತ್ತು ಭಾವನಾತ್ಮಕ ಭಕ್ತಿಯ ಬೇಡಿಕೆ. ಅದು ಒಂದೇ. ರಾಯರೇ, ನಾನು ಕಾಯಾ ವಾಚಾ ಮನಸಾ ಸತ್ಯವಾಗಿ ನಡೆದುಕೊಂಡಿದ್ದರೆ, ಹೃದಯದಿಂದ ಒಳ್ಳೆಯತನ ಅನುಸರಿಸಿದ್ದರೆ, ಮನುಷ್ಯ, ಪಕ್ಷಿ ಪ್ರಾಣಿಯ ಆತ್ಮದಲ್ಲಿ ಸಮಾನವಾಗಿ ದೇವರಿದ್ದಾನೆ ಎಂದು ನಂಬಿದ್ದರೆ, ಯಾರಿಗೂ ಕೇಡು ಬಯಸದೇ ಮೋಸ ವಂಚನೆ ಅನ್ಯಾಯ ಮಾರ್ಗದಲ್ಲಿ ನಡೆದು ನೊಂದವರಿಗೆ ನಂಬಿದವರಿಗೂ ಭುಜಕೊಟ್ಟು ಬದುಕಿದ್ದರೆ, ನನ್ನ ತಂದೆ – ತಾಯಿಯನ್ನು ನೋಯಿಸದೇ ಉತ್ತಮ ಮಗನಂತೆ ಸಂತೈಸಿದ್ದರೆ, ಅನ್ನಕೊಟ್ಟ ಶಾರದೆ ಸೇವೆ ನಿಷ್ಠೆಯಿಂದ ಮಾಡಿದ್ದರೆ, ಕಾಯಕ ಮಾಡುವ ಎಲ್ಲಾ ಕ್ಷೇತ್ರದಲ್ಲೂ ಪ್ರಾಮಾಣಿಕನಾಗಿದ್ದರೆ, ರಾಯರು ನನ್ನ ಹೃದಯದಲ್ಲಿದ್ದರೆ ಸಾವಿನ ಮನೆ ಕದತಟ್ಟುತ್ತಿರುವ ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ ಎಂದು. ರಾಯರು ನನ್ನ ಬೇಡಿಕೆಗೆ ಬೃಂದಾವನದಿಂದ ಎದ್ದುಬಂದು ಪಕ್ಕನಿಂತು ಅವನ ಉಳಿಸಿಬಿಟ್ಟರು! ಕೋಮಲ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾನೆ ಎಂದು ಜಗ್ಗೇಶ್ ಟ್ವೀಟ್? ನಲ್ಲಿ ತಿಳಿಸಿದ್ದಾರೆ.
ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು, ಸ್ವಂತ ವ್ಯವಹಾರವನ್ನು ನಗರದ ಕಾರ್ಪೊರೇಷನ್ ನಲ್ಲಿ ಶುರುಮಾಡಿ ಯಶಸ್ವಿಯಾದ. ಆದರೆ ಇತ್ತೀಚೆಗೆ ತನಗೆ ಬರಬೇಕಾದ ಬಿಲ್?ಗೆ ಅಲ್ಲಿನ ಕೆಲ ಲಂಚಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿಬಿಟ್ಟರು.
ಅದನ್ನು ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕೊರೊನಾ ಮಾರಿ ಮೈಸೇರಿ ತುಂಬ ಗಂಭೀರ ಆಗಿಬಿಟ್ಟ. ದೇವರಿಗೆ ಗೊತ್ತು ನಾನು ಎಲ್ಲರಿಂದ ಮುಚ್ಚಿಟ್ಟು ಅಣ್ಣನಾಗಿ ಅವನ ಉಳಿಸಿಕೊಂಡ ಕಷ್ಟ. ಅವನಿಗೆ ಸಹಾಯ ಮಾಡಿದ ಡಾ. ಮಧುಮತಿ, ನಾದನಿ ಡಾ. ಲಲಿತಾ ನರ್ಸ್?ಗಳ ಪಾದಕ್ಕೆ ನನ್ನ ನಮನ. ರಾಯರೆ ಎಂದು ತಿಳಿಸಿದ್ದಾರೆ.