ರಾಯಚೂರು ವಿ.ವಿಗೆ ಜಿಲ್ಲಾ ಪಂಚಾಯತ್ ಸಿಇಓ ಶಶಿಧರ್ ಕುರೇರ ಭೇಟಿ

ರಾಯಚೂರು,ಜ.೧೨- ವಿಶ್ವವಿದ್ಯಾಲಯಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಶಶಿಧರ್ ಕುರೇರ ಹಾಗೂ ಜಿಲ್ಲಾ ಮತ್ತು ತಾಲೂಕು ಸಮಾಜ ಕಲ್ಯಾಣ ಇಲಾಖೆಗಳ ಅಧಿಕಾರಿಗಳ ತಂಡದೊಂದಿಗೆ ಮಂಗಳವಾರ ಭೇಟಿ ನೀಡಿ ರಾಯಚೂರು ವಿವಿಯ ವಸತಿ ನಿಲಯಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ಸುಪರ್ದಿಗೆ ಹಸ್ತಾಂತರಿಸುವ ಬಗ್ಗೆ ಕುಲಸಚಿವ ಪ್ರೊ.ವಿಶ್ವನಾಥ ಎಂ ಅವರೊಂದಿಗೆ ಚರ್ಚಿಸಿದರು.
ರಾಯಚೂರು ವಿವಿಯ ವಸತಿ ನಿಲಯದ ಕಟ್ಟಡಗಳ ಹಾಗೂ ಅದರ ನಿರ್ವಹಣೆಯ ಬಗ್ಗೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು ವಿವಿಯ ನೂರು ವಿದ್ಯಾರ್ಥಿನಿಯರ ಹಾಗೂ ನೂರು ವಿದ್ಯಾರ್ಥಿಗಳ ಉಳಿಯುವಂತ ವಿಶ್ವವಿದ್ಯಾಲಯದ ವಸತಿನಿಲಯದ ವಿವಿಧ ಬ್ಲಾಕ್‌ಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ಕಾರ್ಯವನ್ನು ಚುರುಕುಗೊಳಿಸಿ, ಹದಿನೈದು ದಿನಗಳಗೊಳಗಾಗಿ ತಮ್ಮ ಸುಪರ್ದಿಗೆ ಪಡೆದುಕೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೋತದಾರ, ತಾಲೂಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬೇಬಿ ಹುಲ್ಸವಾರ್, ವಿಶ್ವವಿದ್ಯಾಲಯದ ಡೀನರು ಪ್ರೊ.ಪಾರ್ವತಿ ಸಿ.ಎಸ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಅಧಿಕಾರಿಗಳಾದ ಡಾ.ಜಿ.ಎಸ್.ಬಿರಾದರ, ವಿದ್ಯಾರ್ಥಿನಿಯರ ನಿಲಯದ ಅಧಿಕಾರಿಗಳಾದ ಡಾ.ಪ್ರಭಾ, ಹಾಗೂ ವಿವಿಯ ಅಭಿಯಂತರರಾದ ಪಂಪಾಪತಿ ಉಪಸ್ಥಿತರಿದ್ದರು.