ರಾಯಚೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆ ಪರಿಹಾರಕ್ಕೆ ಆಗ್ರಹ

ರಾಯಚೂರು.ನ.೧೦- ರಾಯಚೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿ ಕುಲಪತಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಯಚೂರು ವಿಶ್ವವಿದ್ಯಾಲಯ ಆರಂಭವಾಗಿ ೨-೩ ವರ್ಷಗಳು ಕಳೆದು ಇನ್ನೇನು ಮೊದಲನೇ ಬ್ಯಾಚ್ ಹೊರ ಹೋಗುವ ಸಮಯ ಬಂದಿದ್ದರೂ ಕೂಡ ರಾಯಚೂರು ವಿಶ್ವವಿದ್ಯಾಲಯದ ಅಧೀನದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ನಮ್ಮ ವಿಶ್ವವಿದ್ಯಾಲಯಕ್ಕೆ ಅಗತ್ಯ ಮತ್ತು ಪೂರಕವಾದ ಅನುದಾನವನ್ನು ನೀಡದೆ ಸರ್ಕಾರವು ಶೈಕ್ಷಣಿಕ ಮಟ್ಟವನ್ನು ಕುಂಠಿತಗೊಳಿಸಲು ನೇರ ಕಾರಣವಾಗಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಬಗೆಹರಿಸಬಹುದಾದ ವಿವಿಧ ಬೇಡಿಕೆಗಳನ್ನು ಆಡಳಿತ ಮಂಡಳಿಯವರು ಈಡೇರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಅನುವು ಮಾಡಿ ಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೌನೇಶ್ ತುಗ್ಗಲದಿನ್ನಿ, ಮಧುಸೂದನ, ಸಂತೋಷ್ ಪಾಟೀಲ್, ಅಂಬರೀಶ, ಚೆನ್ನಯ್ಯಸ್ವಾಮಿ, ಟೈಮದ್ ಪಾಷಾ, ಸುರೇಶ, ಮಾರ್ತಾಂಡ, ಮೌನೇಶ್, ನಿತಿನ್, ಚಂದ್ರು, ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.