ರಾಯಚೂರು ವಿವಿ : ಹೆಚ್ಚಿನ ಅನುದಾನಕ್ಕೆ ಶಾಸಕ ದದ್ದಲ್ ಒತ್ತಾಯ

ರಾಯಚೂರು.ಸೆ.೨೨- ರಾಯಚೂರು ವಿಶ್ವ ವಿದ್ಯಾಲಯಕ್ಕೆ ಕಳೆದ ಎರಡು ವರ್ಷಗಳಿಂದ ಅನುದಾನ ನೀಡದೆ ಸರಕಾರ ತೀವ್ರ ನಿರ್ಲಕ್ಷ್ಯ ತೋರುತ್ತಿದೆ ಎಂದು ಗ್ರಾಮೀಣ ಶಾಸಕ ದದ್ದಲ ಬಸವನಗೌಡ ಅವರು ಆರೋಪಿಸಿದರು.
ವಿಧಾನಸಭಾ ಅಧಿವೇಶನದಲ್ಲಿ ರಾಜ್ಯದಲ್ಲಿ ನೂತನ ಎಂಟು ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ವಿಷಯ ಪ್ರಸ್ತಾಪನೆ ಸಂದರ್ಭದಲ್ಲಿ ಮಾತನಾಡಿದ ಅವರು, ಕೇವಲ ನೂತನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದರೆ ಸಾಲದು, ಈ ಹಿಂದೆ ಸ್ಥಾಪಿಸಿದ ವಿವಿಗಗಳಿಗೆ ಅನುದಾನ ನೀಡುವ ಕೆಲಸವನ್ನು ಸರಕಾರ ಮಾಡಬೇಕು.
ರಾಯಚೂರು ವಿಶ್ವವಿದ್ಯಾಲಯಕ್ಕೆ ಕಳೆದ ಎರಡು ವರ್ಷದಲ್ಲಿ ಬೇಡಿಕೆ ಅನುದಾನ ನೀಡದ ಕಾರಣ ವಿವಿಯಲ್ಲಿ ವೇತನ ನೀಡಲು ಅಸಾಧ್ಯವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕೇವಲ ೬೦ ಲಕ್ಷ ರೂ. ಮಾತ್ರ ನೀಡಲಾಗಿದೆ. ಭೋದಕ ಮತ್ತು ಭೋದಕೇತರ ಸಿಬ್ಬಂದಿ ನೇಮಕ ಮಾಡಿಕೊಳ್ಳದೆ ವಿವಿ ನಿರ್ವಹಿಸಬೇಕಾಗಿದೆ. ಕೇಂದ್ರ ಸರಕಾರದ ನೀತಿ ಆಯೋಗ ಪಟ್ಟಿಯಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಮಹತ್ವಾಕ್ಷಿ ಜಿಲ್ಲೆಗಳಾಗಿ ಗುರುತಿಸಲಾಗಿದೆ. ಎರಡು ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ಒಳಗೊಂಡ ರಾಯಚೂರು ವಿಶ್ವ ವಿದ್ಯಾಲಯಕ್ಕೆ ಅನುದಾನ ನೀಡದಿದ್ದರೆ, ಈ ಭಾಗದ ಶೈಕ್ಷಣಿಕ ಅಭಿವೃದ್ಧಿ ಹೇಗೆ ಸಾಧ್ಯ?.
ಎರಡು ಜಿಲ್ಲೆಗಳ ಒಟ್ಟು ೧೩೦೦ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದಾರೆ. ಬೋಧಕರೆ ಇಲ್ಲದೆ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುವುದಾದರು ಹೇಗೆ ಎಂದು ಸರಕಾರದ ವಿರುದ್ಧ ಗರಂ ಆದ ಅವರು, ರಾಜ್ಯ ಸರಕಾರ ರಾಜ್ಯದಲ್ಲಿ ನೂತನ ವಿಶ್ವವಿದ್ಯಾಲಯಗಳು ಸ್ಥಾಪಿಸುವುದನ್ನು ಕೈ ಬಿಟ್ಟಿರುವ ಹಳೆ ವಿವಿಗಳಿಗೆ ಅನುದಾನ ಒದಗಿಸುವ ಮೂಲಕ ಈ ವಿವಿಗಳನ್ನ ಗಟ್ಟಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಹಿಂದುಳಿದ ಜಿಲ್ಲೆಗಳ ವಿಶ್ವ ವಿದ್ಯಾಲಯಕ್ಕೆ ಕೇವಲ ೬೦ ಲಕ್ಷ ರು ಮಾತ್ರ ನೀಡಿದರೆ, ವಿಶ್ವ ವಿದ್ಯಾಲಯವನ್ನು ಯಾವ ರೀತಿ ನಿರ್ವಹಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು ವಿವಿ ಆಡಳಿತ ಮಂಡಳಿ ಸಿಬ್ಬಂದಿಗಳಿಗೆ ವೇತನ ನೀಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇದೆ. ಈ ಸಮಸ್ಯೆ ಬಗ್ಗೆ ಸರಕಾರ ತಕ್ಷಣ ಗಮನ ಹರಿಸುವಂತೆ ಆಗ್ರಹಿಸಲಾಯಿತು.