ರಾಯಚೂರು ವಿವಿ: ಆರಂಭಕ್ಕೆ ಒತ್ತಾಯ

ರಾಯಚೂರು.ನ.೦೯- ರಾಯಚೂರು ವಿಶ್ವವಿದ್ಯಾಲಯವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸಬೇಕೆಂದು ರಾಯಚೂರು ವಿವಿ ಹೋರಾಟ ಸಮಿತಿಯ ಸಂಚಾಲಕ ರಜಾಕ್ ಉಸ್ತಾದ್ ಅವರು ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಯಚೂರು ವಿಶ್ವವಿದ್ಯಾಲಯಕ್ಕೆ ಪ್ರಸ್ತುತ ಉಪಕುಲಪತಿಗಳಾಗಿ ಡಾ.ಹರೀಶ್ ರಾಮಸ್ವಾಮಿ ನೇಮಕಗೊಂಡಿದ್ದು, ಸರ್ಕಾರದ ಆದೇಶದಂತೆ ನ. ೧೭ ರಿಂದ ರಾಯಚೂರು ವಿಶ್ವವಿದ್ಯಾಲಯ ಪ್ರಾರಂಭಿಸಬೇಕು. ಈ ಕುರಿತು ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಬೆಂಗಳೂರಿಗೆ ನಿಯೋಗ ತೆರಳಲಾಗುವುದು. ಜಿಲ್ಲೆಯ ೧೦ ಸಾವಿರ ಪದವಿಧರ ವಿದ್ಯಾರ್ಥಿಗಳು ಮತ್ತು ೨೦ ಸ್ನಾತಕೋತ್ತರ ಪದವಿಧರರು ಸೇರದಂತೆ ಜಿಲ್ಲೆಯ ಜನತೆ ವಿವಿ ಪ್ರಾರಂಭಕ್ಕಾಗಿ ಕಾದು ನೊಡುತ್ತಿದ್ದು, ನ.೧೭ರಂದು ವಿವಿ ಆರಂಭಿಸಬೇಕೆಂದು ಅಗ್ರಹಿಸಿದರು.
ಪ್ರಸ್ತುತ ರಾಯಚೂರು ವಿವಿ ಪ್ರಾರಂಭಿಸಲು ಅಗತ್ಯ ಕಟ್ಟಡ, ಹಾಸ್ಟೆಲ್, ನೀರು ಸೇರಿದಂತೆ ಇನ್ನಿತರ ಸೌಲಭ್ಯಗಳಿದ್ದು ಇನ್ನೂ ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿವೆ ಅವುಗಳನ್ನು ನಿವಾರಿಸಿ ಕೂಡಲೇ ವಿಶ್ವವಿದ್ಯಾಲಯ ಪ್ರಾರಂಭಿಸಬೇಕು. ಕಳೆದ ಐದು ತಿಂಗಳಲ್ಲಿ ಸರ್ಕಾರವು ರಾಯಚೂರು ವಿಶ್ವವಿದ್ಯಾಲಯ ಕಾರ್ಯಾರಂಭಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳ ಬಹುದಾಗಿತ್ತು, ಆದರೆ ಸರ್ಕಾರವು ಇದುವರೆಗೂ ವಿಶ್ವವಿದ್ಯಾಲಯ ಆರಂಭಕ್ಕೆ ಕೈಗೊಳ್ಳಬೇಕಾದ ಕಾಲೇಜುಗಳ ಅಫಿಲೇಷನ್ ಕಾರ್ಯ ಇನ್ನು ಪೂರ್ಣಗೊಂಡಿಲ್ಲ ಎಂದು ನೆಪ ಹೇಳುತ್ತಿದೆ. ಕೂಡಲೇ ಜಿಲ್ಲೆಯ ಪ್ರತಿನಿಧಿಗಳು ರಾಯಚೂರು ವಿಶ್ವವಿದ್ಯಾಲಯ ಪ್ರಾರಂಭದ ದಿನಾಂಕ ನಿಗದಿಪಡಿಸಿ ಘೋಷಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲ ವಿರೇಶ್ ಹೀರಾ, ಶಿವುಕುಮಾರ್ ಯಾದವ್, ಮಹಮ್ಮದ್, ರಾಜೇಶ್ ಕುಮಾರ್ ಉಪಸ್ಥಿತರಿದ್ದರು.