ರಾಯಚೂರು ವಿವಿಯಲ್ಲಿ ಕುಲಸಚಿವರಿಂದ ಉದ್ಯೋಗ ಮೇಳಕ್ಕೆ ಚಾಲನೆ

ರಾಯಚೂರು,ನ.೪-ರಾಯಚೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಪದವಿಧರರಿಗೆ ರಾಯಚೂರು ವಿವಿಯಿಂದ ಉದ್ಯೋಗವಕಾಶ ಕಲ್ಪಿಸುವ ವೇದಿಕೆಯನ್ನು ಸೃಷ್ಠಿಸಿದ್ದು ಬೆಂಗಳೂರಿನ ಸ್ಯಾನ್ ಐ.ಟಿ ಜೊತೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ರಾಯಚೂರು ವಿವಿ ಕುಲಸಚಿವರಾದ ಪ್ರೊ.ವಿಶ್ವನಾಥ ಎಂ ಅವರು ಹೇಳಿದರು.
ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸ್ಯಾನ್ ಐ.ಟಿ.ಸಲ್ಯೂಷನ್ಸ್ ಪ್ರೈ.ಲಿ. ವತಿಯಿಂದ ಮತ್ತು ರಾಯಚೂರು ವಿಶ್ವವಿದ್ಯಾಲಯ ಅವರ ಸಂಯುಕ್ತಾಶ್ರಯದಲ್ಲಿ ನೇಮಕಾತಿ-ತರಬೇತಿ-ನಿಯೋಜನೆ ’ಉಜ್ವಲ ಭವಿಷ್ಯ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದ ಅವರು ರಾಯಚೂರು ಮತ್ತು ಯಾದಗಿರಿ ಮಹತ್ವಾಕಾಂಕ್ಷಿ ಜಿಲ್ಲೆಗಳಾಗಿದ್ದು ಈ ಎರಡು ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಗುಳೆ ಹೋಗುವ ಪರಿಸ್ಥಿತಿಯಿದ್ದು, ಈ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಭಾಗದ ಪದವಿಧರರಿಗೆ ಅವರವರ ಅರ್ಹತೆಗನುಗುಣವಾಗಿ ಆಯ್ಕೆ ಮಾಡಿಕೊಂಡು ವಿವಿಧ ಉದ್ಯಮಗಳಾದ ಸಾಫ್ಟ್‌ವೇರ್ ಕಂಪನಿ, ಮಲ್ಟಿ ನ್ಯಾಷನಲ್ ಬ್ಯಾಂಕ್ ಹಾಗೂ ಪ್ರೈವೆಟ್ ಫೈನಾನ್ಸ್ ಬ್ಯಾಂಕ್ ಹಾಗೂ ಇನ್ನಿತರ ಉದ್ಯಮಗಳಿಗೆ ನೇಮಕಾತಿಯೊಂದಿಗೆ ತರಬೇತಿ ನೀಡಿ ನಿಯೋಜಿಸಲಾಗುವುದು ಮುಂಬರುವ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಬೇರೆ ಬೇರೆ ಉದ್ಯಮಗಳನ್ನು ರಾಯಚೂರು ವಿಶ್ವವಿದ್ಯಾಲಯಕ್ಕೆ ಕರೆಯಿಸಿ ಉದ್ಯೋಗವಕಾಶ ನೀಡುವುದಕ್ಕೆ ಮುಂದಾಗುವುದು ಎಂದು ಅವರು ತಿಳಿಸಿದರು.
ಬೆಂಗಳೂರಿನ ಸ್ಯಾನ್ ಐ.ಟಿ.ಸಲ್ಯೂಷನ್ಸ್‌ನ ನಿರ್ದೇಶಕರಾದ ಸಿದ್ದೇಶ ಲೋನಿ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳೊಂದಿಗೆ ಸಂವಾದಮಾಡಿ ಅವರ ಜ್ಞಾನಕ್ಕನುಗುಣವಾಗಿ ಕಂಪನಿಗಳನ್ನು ಸೂಚಿಸಿ ಕಂಪನಿಗಳಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ರಾಜ್ಯದಲ್ಲಿ ಎಲ್ಲಿಯಾದರು ಕೆಲಸ ಮಾಡಬಹುದು ಸುಮಾರು ೨೫-೩೦ ಸಾವಿರ ವೇತನ ಬರುವ ಹಾಗೆ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿ ನಿಯೋಜಿಸಲಾಗಿದೆ, ಪದವಿಧರರು ಮನೆಯಿಂದ ಹೊರಗಡೆ ಬಂದರೆ ಜಗತ್ತಿನ ಪರಿಚಯವಾಗುತ್ತದೆ, ಈ ಜಿಲ್ಲೆಗಳಲ್ಲಿ ಉದ್ಯಮಗಳು ಕಡಿಮೆ ಇರುವುದರಿಂದ ಉದ್ಯೋಗಾವಕಾಶಗಳ ಕೊರತೆ ಇದ್ದು, ಇನ್ನು ಮುಂದೆ ಉದ್ಯಮಿಗಳು ನಿಮ್ಮನ್ನು ಹುಡಿಕಿಕೊಂಡು ಬರುವ ಹಾಗೆ ಸ್ಯಾನ್ ಐ.ಟಿ.ಸಲ್ಯೂಷನ್ಸ್ ಪ್ರೈ.ಲಿ. ಮತ್ತು ರಾಯಚೂರು ವಿಶ್ವವಿದ್ಯಾಲಯ ಈ ಒಂದು ಯೋಜನೆ ಹಮ್ಮಿಕೊಂಡಿದೆ ಈ ಅವಕಾಶವನ್ನು ಪದವಿಧರ ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ರಾವಿವಿಯ ಕೌಶಲ್ಯ ಅಭಿವೃದ್ಧಿ ಮಂಡಳಿ ಸಲಹೆಗಾರರಾದ ದಿನೇಶ ಬಾಳಿಗ ಅವರು ಮಾತನಾಡಿ, ಉದ್ಯೋಗ ಮೇಳ ಅನ್ನುವುದಕ್ಕಿಂತ ಉಜ್ವಲ ಭವಿಷ್ಯ ಮೇಳ ಎನ್ನುವುದು ಸೂಕ್ತ ಈ ಪ್ರಾಂತ್ಯದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕೊಡುವ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಮಲ್ಟಿನ್ಯಾಷನಲ್ ಬ್ಯಾಂಕ್‌ಗಳಿಗೆ ಆಯ್ಕೆ ಮಾಡಲು ೭೫ ಪದವಿಧರರನ್ನು ಕೌನ್ಸಲಿಂಗ್ ಮಾಡಿ, ೪೦ ಪದವಿಧರರು ಪರೀಕ್ಷೆ ಬರೆದಿದ್ದು, ೨೫ ಪದವಿಧರರು ಉತ್ತೀರ್ಣರಾಗಿದ್ದು, ೧೪ ಪದವಿಧರರು ಆಯ್ಕೆಯಾಗಿದ್ದು ೪ ಪದವಿಧರರನ್ನು ತಡೆಹಿಡಿಯಲಾಗಿದೆ. ೫೨ ವಿದ್ಯಾರ್ಥಿಗಳು ಸಾಫ್ಟ್‌ವೇರ್ ಕಂಪನಿಗಳಿಗೆ ಆಯ್ಕೆಯಾಗಿದ್ದು, ಒಬ್ಬ ವಿದ್ಯಾರ್ಥಿ ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮೌಲ್ಯಮಾಪನ (ಕುಲಸಚಿವ) ಪ್ರೊ.ಯರಿಸ್ವಾಮಿ ಎಂ., ಉಪಕುಲಸಚಿವ ಡಾ.ಜಿ.ಎಸ್.ಬಿರಾದರ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಅತಿಥಿ ಉಪನ್ಯಾಸಕರಾದ ಇತಿಹಾಸ ವಿಭಾಗದ ಡಾ.ಪದ್ಮಜಾ ದೇಸಾಯಿ ಪ್ರಾರ್ಥಿಸಿದರು, ರಾಜ್ಯಶಾಸ್ತ್ರ ವಿಭಾಗದ ನಾಗವೇಣಿ ನಿರೂಪಿಸಿದರು, ಇಂಗ್ಲೀಷ ವಿಭಾಗದ ಪ್ರವೀಣ ಸ್ವಾಗತಿಸಿದರು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ರವಿಕುಮಾರ ವಂದಿಸಿದರು.