ರಾಯಚೂರು ವಿವಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ರಾಯಚೂರು,ಜ.೨೨- ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರದು ವಿಶಿಷ್ಟ ವ್ಯಕ್ತಿತ್ವ, ನೇರನಿರ್ಭೀತ ನುಡಿಗಳಿಂದ ಸಮಾಜದಲ್ಲಿ ನಡೆಯುತ್ತಿದ್ದ ಅಸಮಾನತೆಗಳನ್ನು ದುವ್ರರ್ತನೆಗಳನ್ನು ಸರಿಪಡಿಸಲು ತಪ್ಪುಗಳನ್ನು ತಿದ್ದಲು ತಮ್ಮ ವಚನಗಳನ್ನು ಪ್ರಪಂಚಕ್ಕೆ ಸಾದರ ಪಡಿಸಿದ್ದು, ಗೋಚರಿಸುತ್ತದೆ.
ಜ್ಞಾನದ ಸರೋವರವನ್ನು ಬೆಳೆಸಲಿಕ್ಕೆ ಇವರ ಆಲೋಚನೆಗಳು ಕೊಡುಗೆಯಾಗಿದ್ದು, ಇಂತಹ ಶರಣರ ಬಗ್ಗೆ ವಿಚಾರ ಸಂಕೀರಣ ಮಾಡಬೇಕಾಗಿದೆ. ಶರಣರು ಹೇಳಿದ ನಿಜಾಂಶಗಳನ್ನು ಎಷ್ಟರ ಮಟ್ಟಿಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಚಿಂತನೆಗಳನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಹರೀಶ ರಾಮಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ರಾಯಚೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಅಂಬಿಗರ ಚೌಡಯ್ಯ ಅವರ ೯೦೩ ನೇ ಜಯಂತ್ಯೋತ್ಸವನ್ನು ಅವರ ಭಾವಚಿತ್ರಕ್ಕೆ ಕುಲಪತಿಗಳು ಮಾಲಾರ್ಪಣೆ ಮಾಡುವುದರ ಮೂಲಕ ಆಚರಿಸಲಾಯಿತು. ಕನ್ನಡ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ.ಮಲ್ಲೇಶ ಛಲುವಾದಿ ಮಾತನಾಡಿ, ೧೨ ನೇ ಶತಮಾನದ ಕಾಲಘಟ್ಟ ಇಡೀ ಶತಮಾನ ಸುವರ್ಣ ಯುಗದ ಕಾಲ ಈ ಕಾಲದಲ್ಲಿ ಹೊಸದಾದ ಚಿಂತನೆಗಳಿಂದ ಶರಣರನ್ನ ಹುಟ್ಟುಹಾಕಿ ಅವರ ಮೂಲಕ ಸಮಾಜೋಧಾರ್ಮಿಕ ಚಳುವಳಿ ಹುಟ್ಟಿಕೊಂಡಿತು. ಎಂದೆಂದೂ ಕಾಣದ ಮಾನವೀಯ ಮೌಲ್ಯಗಳು ಈ ಕಾಲದಲ್ಲಿ ಉದ್ಭವಿಸಿ ಜಾತಿ, ಮತ, ಪಂಥ ಎನ್ನದೇ ಎಲ್ಲರಿಗೂ ಸಮಾನವಾಗಿ ಚಿಂತಿಸಲು ಎಲ್ಲಾ ಶರಣರು ಅವಕಾಶ ಮಾಡಿಕೊಟ್ಟಿದ್ದಾರೆ. ಅರಮನೆಯಲ್ಲಿರುವಂತಹ ಸಾಹಿತ್ಯವನ್ನು ಗುಡಿಸಲುವರೆಗೂ ಕೂಡ ತಲುಪಿಸುವಲ್ಲಿ ಶರಣರು ಪ್ರಯತ್ನಿಸಿದರು ಎಂದು ಅವರು ಹೇಳಿದರು.
ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ.ಪದ್ಮಜಾ ದೇಸಾಯಿ ಮಾತನಾಡಿ, ಆಧುನಿಕ ಯುಗದಲ್ಲಿ ನೈಜ ನೀತಿಯುತ ಪ್ರಮಾಣಿಕ ಜೀವನಕ್ಕೆ ಅಂಬಿಗರ ಚೌಡಯ್ಯರ ವಚನಗಳು ಪ್ರತಿಯೊಬ್ಬರಿಗೂ ಅವಶ್ಯಕ ಕನ್ನಡ ವಚನ ಸಾಹಿತ್ಯದಲ್ಲಿ ಒಬ್ಬ ಸಂತ, ಕವಿ, ಸಾಮಾಜಿಕ ವಿಮರ್ಶಕರಾಗಿದ್ದಾರೆ ಎಂದು ಅವರು ತಿಳಿಸಿದರು.
ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ.ರಾಘವೇಂದ್ರ ಫತ್ತೇಪುರ, ಡೀನರಾದ ಡಾ.ಪಿ.ಭಾಸ್ಕರ್, ಉಪ ಕುಲಸಚಿವರಾದ ಗುರುರಾಜ.ಎಸ್.ಬಿರಾದಾರ್ ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.