ರಾಯಚೂರು – ಯಾದಗಿರಿ ಜಿಲ್ಲೆಗಳ ೨೨೪ ಕಾಲೇಜು ನೂತನ ವಿವಿ ವ್ಯಾಪ್ತಿಗೆ

ಗುಲ್ಬರ್ಗಾ ವಿವಿಯಿಂದ ರಾಯಚೂರು ವಿವಿಗೆ ಸ್ಥಿರ, ಚರಾಸ್ತಿ ಹಸ್ತಾಂತರ
ರಾಯಚೂರು.ಏ.೦೮- ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದ ರಾಯಚೂರು, ಯಾದಗಿರಿ ಜಿಲ್ಲೆಗಳ ೨೨೪ ಕಾಲೇಜುಗಳನ್ನೊಳಗೊಂಡ ರಾಯಚೂರು ವಿಶ್ವವಿದ್ಯಾಲಯದ ಸ್ಥಿರ ಮತ್ತು ಚರಾಸ್ತಿಯನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಹಸ್ತಾಂತರಿಸಲಾಗುತ್ತಿದೆಂದು ಉಪ ಕುಲಪತಿಗಳಾದ ದಯಾನಂದ ಅಗಸರ್ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಯಚೂರು – ಯಾದಗಿರಿ ಜಿಲ್ಲೆಗಳ ಸ್ನಾತಕ, ಸ್ನಾತಕೋತರ ಪದವಿಗಳಿಗೆ ಸಂಬಂಧಿಸಿದಂತೆ ಅಧಿಕೃತವಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಇಂದು ಎಲ್ಲಾ ದಾಖಲಾತಿಗಳನ್ನು ರಾಯಚೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಹರೀಶ್ ರಾಮಸ್ವಾಮಿ ಅವರಿಗೆ ಹಸ್ತಾಂತರಿಸಲಾಗುತ್ತಿದೆ. ಪ್ರಸ್ತುತವಾಗಿ ಪದವಿ ಹಾಗೂ ಸ್ನಾತಕೋತರ ಪದವಿಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈಗಾಗಲೇ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯುತ್ತಾರೆ.
೨೦೨೧-೨೨ ನೇ ಸಾಲಿನ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ೨೨೪ ಪದವಿ ಕಾಲೇಜುಗಳು ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಯಚೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಪ್ರಾರಂಭವಾಗಲಿದೆ. ರಾಯಚೂರು ಸ್ನಾತಕೋತರ ಕೇಂದ್ರವೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಅಧೀನದಲ್ಲಿ ಪ್ರಾರಂಭವಾಗಿ ಇಂದಿಗೆ ೩೦ ವರ್ಷ ಕಳೆದಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ರಾಯಚೂರು ವಿಶ್ವವಿದ್ಯಾಲಯದ ಸುಮಾರು ೨೫೦ ಎಕರೆ ಸ್ಥಳದಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು, ಇದರಲ್ಲಿ ಸುಮಾರು ೧೮ ಸ್ನಾತಕೋತರ, ೧೮ ಡಿಪ್ಲೋಮಾ ಸ್ನಾತಕೋತರ ಪದವಿಗಳನ್ನು ಒಳಗೊಂಡಿದೆ.
ರಾಯಚೂರು ವಿವಿಯಲ್ಲಿ ಸಿಬ್ಬಂದಿಗಳು ಕಡಿಮೆಯಿದ್ದು, ಅತಿಥಿ ಉಪನ್ಯಾಸಕರಿಂದ ಈಗಾಗಲೇ ಬೋಧನೆ ಮಾಡುತ್ತಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಯಚೂರು ವಿಶ್ವವಿದ್ಯಾಲಯದ ೨.೨೦ ಕೋಟಿ ಅನುದಾನವನ್ನು ಸರ್ಕಾರ ನೀಡಿದ್ದು, ಇಂದು ಗುಲ್ಬರ್ಗಾ ವಿಶ್ವವಿದ್ಯಾಲಯವೂ ರಾಯಚೂರು ವಿಶ್ವವಿದ್ಯಾಲಯಕ್ಕೆ ೨ ಕೋಟಿ ಅನುದಾನ ನೀಡಿದೆ. ಮುಂದಿನ ದಿನಗಳಲ್ಲಿ ಬಡ್ಡಿ ಸಮೇತ ೨೦ ಲಕ್ಷ ಅನುದಾನವನ್ನು ನೀಡಲಾಗುತ್ತದೆ. ರಾಯಚೂರು ವಿಶ್ವವಿದ್ಯಾಲಯಕ್ಕೆ ಜಿಲ್ಲೆಯ ೧೨೨ ಪದವಿ ಕಾಲೇಜು ಹಾಗೂ ಯಾದಗಿರಿ ಜಿಲ್ಲೆಯ ೧೦೨ ಪದವಿ ಕಾಲೇಜು ಒಳಗೊಂಡಿರುತ್ತದೆ.
ವಿವಿಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಸರ್ಕಾರ ಹೆಚ್ಚಿನ ಅನುದಾನ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿದರೇ, ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬಹುದಾಗಿದೆ. ನೂತನ ವಿಶ್ವವಿದ್ಯಾಲಯದ ೨೨೪ ಕಾಲೇಜುಗಳು ಎನ್‌ಓಸಿ ಪಡೆದು ಅರ್ಹತೆ ಪಡೆದುಕೊಂಡಿವೆ. ಈಗಾಗಲೇ ರಾಯಚೂರು, ಯಾದಗಿರಿ ಜಿಲ್ಲೆಯ ೨೨೪ ಕಾಲೇಜುಗಳ ವಿಶ್ವವಿದ್ಯಾಲಯದ ಬಾಕಿ ಶುಲ್ಕ ೧ ಕೋಟಿ ರೂ. ನೀಡಬೇಕಾಗಿದೆ. ಶೈಕ್ಷಣಿಕ ಸಾಲಿನಲ್ಲಿ ರಾಯಚೂರು ವಿಶ್ವವಿದ್ಯಾಲಯಕ್ಕೆ ನೀಡಬೇಕಾಗುತ್ತದೆಂದರು.
ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಡಿಇಡಿ ವಿಷಯಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ದೋಷಗಳಿಂದ ಕಳೆದ ಬಾರೀ ಫಲಿತಾಂಶ ಬೇಗನೇ ಪ್ರಕಟಗೊಳ್ಳಲಿಲ್ಲ. ಮುಂದಿನ ದಿನಗಳಲ್ಲಿ ಈ ತಾಂತ್ರಿಕ ದೋಷಗಳು ನಡೆಯದಂತೆ ಫಲಿತಾಂಶ ತ್ವರತಿಗತಿಯಲ್ಲಿ ಬಿಡುಗಡೆ ಮಾಡಲಾಗುವುದೆಂದು ಹೇಳಿದರು. ನಂತರ ರಾಯಚೂರು ವಿವಿ ಕುಲಪತಿಗಳಾದ ಡಾ.ಹರೀಶ ರಾಮಸ್ವಾಮಿ ಅವರು ಮಾತನಾಡುತ್ತಾ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ರಾಯಚೂರು ವಿಶ್ವವಿದ್ಯಾಲಯಕ್ಕೆ ಸಂಪೂರ್ಣವಾಗಿ ಅಸ್ತಿತ್ವವನ್ನು ಇಂದು ನೀಡಿದ್ದು, ಶೈಕ್ಷಣಿಕ ಸಾಲಿನಲ್ಲಿ ವಿಶ್ವವಿದ್ಯಾಲಯವನ್ನು ಉನ್ನತವಾಗಿ ಬೆಳೆಸಲು ಮುಂದಾಗುತ್ತೇನೆ. ಜಿಲ್ಲೆಯ ಜನಪ್ರತಿನಿಧಿಗಳು ಸಂಪೂರ್ಣವಾಗಿ ನನಗೆ ಬೆಂಬಲ ನೀಡಿದ್ದು, ನಾನು ಪ್ರಾಮಾಣಿಕವಾಗಿ ರಾಯಚೂರು ವಿಶ್ವವಿದ್ಯಾಲಯವನ್ನು ಮುಂದೆ ತರಲು ಪ್ರಯತ್ನಿಸುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ವಿಶ್ವನಾಥ, ರಿಜಿಸ್ಟರ್ ಶರಣಬಸಪ್ಪ, ಗಂಗಾಧರ ನಾಯಕ, ಶರಣಬಸವ ಜೋಳದಹೆಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.