ರಾಯಚೂರು ಬಳಿ ಡ್ರಗ್ಸ್ ಪಾರ್ಕ್

ತುಮಕೂರು, ಜೂ. ೨೩- ರಾಜ್ಯದಲ್ಲಿ ಮತ್ತಷ್ಟು ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಠಿಸುವ ಸಲುವಾಗಿ ಮುಂಬರುವ ನವೆಂಬರ್ ತಿಂಗಳಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಇಂದಿಲ್ಲಿ ತಿಳಿಸಿದರು.ನವೆಂಬರ್ ೨, ೩ ಮತ್ತು ೪ ರಂದು ಮೂರು ದಿನಗಳ ಅರಮನೆ ಮೈದಾನದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಅವರು ಹೇಳಿದರು.ನಗರದಲ್ಲಿ ಹೊರವಲಯದ ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಏರ್ಪಡಿಸಲಾಗಿರುವ ಉದ್ಯಮಿಯಾಗು ಉದ್ಯೋಗ ನೀಡು ಹಾಗೂ ಕೈಗಾರಿಕಾ ಅದಾಲತ್ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ೨೦೧೦ ಮತ್ತು ೨೦೧೨ ರಲ್ಲಿ ಆಯೋಜಿಸಿದ್ದ ವಿಶ್ವ ಹೂಡಿಕೆದಾರರ ಸಮಾವೇಶ ಬಹಳ ಯಶಸ್ವಿಯಾಗಿತ್ತು. ಇದರಿಂದ ೧೫ ಲಕ್ಷ ಜನರಿಗೆ ಉದ್ಯೋಗಾವಕಾಶ ದೊರೆತ್ತಿತ್ತು. ಹಾಗಾಗಿಯೇ ಮತ್ತೆ ನವೆಂಬರ್‌ನಲ್ಲೂ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಕೈಗಾರಿಕೆಯಲ್ಲಿ ಹಾಗೂ ಬಂಡವಾಳ ಆಕರ್ಷಿಸುವಲ್ಲಿ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ.
ನಾವು ಮಕ್ಕಳನ್ನು ಬರೀ ಪದವೀಧರರನ್ನಾಗಿ ಮಾಡಿದರೆ ಸಾಲದು, ಅವರನ್ನು ಉದ್ಯಮಿಗಳನ್ನಾಗಿ ಮಾಡಬೇಕು. ಜತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕೆಲಸ ಸಹ ಆಗಬೇಕು ಎಂದು ಅವರು ತಿಳಿಸಿದರು.
ಜಿಲ್ಲಾವಾರು ದೊರೆಯುವ ಕಚ್ಚಾವಸ್ತುಗಳ ಬಳಸಿಕೊಂಡು ಜಿಲ್ಲಾ ಮಟ್ಟದಲ್ಲಿ ಯಾವ ಕೈಗಾರಿಕೆ ಸ್ಥಾಪನೆ ಸೂಕ್ತ ಎಂಬ ಬಗ್ಗೆ ಹಾಗೂ ಸರ್ಕಾರದಿಂದ ಕೈಗಾರಿಕೆಗಳ ಸ್ಥಾಪನೆಗೆ ದೊರೆಯುವ ಸವಲತ್ತುಗಳ ಬಗ್ಗೆ ತಿಳಿಸುವ ಕೆಲಸವನ್ನು ಈ ಕೈಗಾರಿಕಾ ಅದಲಾತ್ ಮೂಲಕ ಮಾಡಲಾಗುತ್ತಿದೆ ಎಂದರು.
ಛಲ ಇರುವವರು ಏನೆಲ್ಲಾ ಸಾಧಿಸುತ್ತಾರೆ ಎನ್ನುವುದನ್ನು ಹೇಳಿಕೊಡುವುದು ಸಹ ಈ ಕಾರ್ಯಕ್ರಮದ ಸದುದ್ದೇಶವಾಗಿದೆ ಎಂದ ಅವರು, ಸರ್ಕಾರವೇ ಕೈಗಾರಿಕೋದ್ಯಮಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕಳೆದ ೨ ವರ್ಷಗಳಲ್ಲಿ ಕೊರೊನಾದಿಂದಾಗಿ ಸಣ್ಣ ಕೈಗಾರಿಕೆಗಳಿಗೆ ತುಂಬಾ ತೊಂದರೆ ಸಿಲುಕಿವೆ. ಹೀಗಾಗಿ ಸಣ್ಣ ಕೈಗಾರಿಕೆಗಳ ಸಾಲ ಸೌಲಭ್ಯದ ವ್ಯವಸ್ಥೆ ಮತ್ತಷ್ಟು ಸರಳೀಕರಣ ಮಾಡಲಾಗಿದೆ. ಕೈಗಾರಿಕೆಗಳು ಎಂದೂ ಸಹ ಚಲಾವಣೆಯಲ್ಲಿರಬೇಕು. ಅದನ್ನು ಅವಲಂಬಿಸಿರುವ ಉದ್ಯೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶ ಹೊಂದಲಾಗಿದೆ ಎಂದರು.ತುಮಕೂರು ಮತ್ತು ಸಿರಾ ನಡುವೆ ೧ ಸಾವಿರ ಎಕರೆಯಲ್ಲಿ ಕೈಗಾರಿಕಾ ಕಾರಿಡಾರ್‌ನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ ೧ ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ. ಹಾಗೆಯೇ ಬಿಜಾಪುರ ಮತ್ತು ಕಲ್ಬುರ್ಗಿ ಮಧ್ಯೆ ಟೆಕ್ಸ್‌ಟೈಲ್ ಪಾರ್ಕ್ ಮಾಡಲಾಗುತ್ತಿದೆ. ಯಾದಗಿರಿ-ರಾಯಚೂರು ಮಧ್ಯೆದ ಬೃಹತ್ ಡ್ರಗ್ ಪಾರ್ಕ್ ಸ್ಥಾಪಿಸಲಾಗುವುದು. ಇದಕ್ಕೂ ಸಹ ಕೇಂದ್ರ ಸರ್ಕಾರ ೧ ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ ಎಂದು ಸಚಿವ ನಿರಾಣಿ ತಿಳಿಸಿದರು.
ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಂಬರುವ ದಿನಗಳಲ್ಲಿ ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತುಮಕೂರು ಮತ್ತು ಸಿರಾ ಮಧ್ಯೆದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವ ಚಿಂತನೆಯಿದೆ ಎಂದರು.
ಮುಂದಿನ ೧೦ ವರ್ಷದಲ್ಲಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಚಿಂತನೆ ಇದ್ದು, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಇನ್ನೂ ಚರ್ಚೆ ಹಂತದಲ್ಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಅಪರ ಮುಖ್ಯಕಾರ್ಯದರ್ಶಿ ರಮಣರೆಡ್ಡಿ, ಕೈಗಾರಿಕೆ ಅಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿಯ ಎನ್. ಶಿವಶಂಕರ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿ.ಪಂ. ಸಿಇಓ ಡಾ. ಕೆ. ವಿದ್ಯಾಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

ನಾಯಕತ್ವ ಬದಲಾವಣೆ ಇಲ್ಲ
ನಮ್ಮ ರಾಜ್ಯದಲ್ಲಿ ಯಾವುದೇ ರೀತಿಯ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು.