ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಿ

ದೇವದುರ್ಗ.ಜ.೧೮- ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದುಳಿದ ರಾಯಚೂರಿಗೆ ಕೇಂದ್ರ ಸರ್ಕಾರ ಏಮ್ಸ್ ಮಂಜೂರು ಮಾಡಲು ಆಗ್ರಹಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ದೇವದುರ್ಗ ಏಮ್ಸ್ ಹೋರಾಟ ಸಮಿತಿ ಸುಳ್ಳು ಆಶ್ವಾಸನೆ ಸಾಕು ಏಮ್ಸ್ ಬೇಕು ಎನ್ನುವ ಘೋಷಾವಾಕ್ಯದೊಂದಿಗೆ ಮಂಗಳವಾರ ಪ್ರತಿಭಟನೆ ನಡೆಸಿತು.
ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ರಾಯಚೂರು ಜಿಲ್ಲೆಗೆ ಏಮ್ಸ್ ಸ್ಥಾಪನೆ ನಡೆಯುತ್ತಿರುವ ಹೋರಾಟ ೨೫೦ದಿನ ಪೂರೈಸಿದೆ. ಸರ್ಕಾರ ನಿರ್ಲಕ್ಷಿಸಿದ್ದು ಕಲ್ಯಾಣ ಕರ್ನಾಟಕ ಭಾಗವನ್ನು ಜನಪ್ರತಿನಿಧಿಗಳು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಜಿಲ್ಲೆಯ ಶಾಸಕರು, ಸಂಸದರು, ಉಸ್ತುವಾರಿ ಸಚಿವರು, ಸಿಎಂ ಬಸವರಾಜ ಬೊಮ್ಮಾಯಿ ಆದಿಯಾಗಿ ಹಲವರು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಸುಳ್ಳು ಆಶ್ವಾಸನೆ ಭರವಸೆಗಳನ್ನು ನೀಡಿದ್ದಾರೆ. ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟವನ್ನು ರಾಜಕೀಯ ಪಕ್ಷಗಳು ಸಂಪೂರ್ಣ ಕಡೆಗಣಿಸಿವೆ ಎಂದು ಆರೋಪಿಸಿದರು.
ಕೂಡಲೇ ರಾಜ್ಯ ಸರ್ಕಾರ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಫೆ.೧ರಂದು ಕೇಂದ್ರ ಸರ್ಕಾರ ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಗೆ ಏಮ್ಸ್ ನೀಡುವ ಬಗ್ಗೆ ಘೋಷಣೆ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹೋರಾಟಗಾರರಾದ ಹನುಮಂತ ಮನ್ನಾಪುರ, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಚ್.ಶಿವರಾಜ್, ಮಹಿಳಾ ಪ್ರತಿನಿಧಿ ರಂಗಮ್ಮ, ನರಸಿಂಗರಾವ್ ಸರ್ಕಿಲ್, ಚಿದಾನಂದಪ್ಪ ಶಿವಂಗಿ, ಖಾಜಾಹುಸೇನ್, ಶಿವರಾಜ್ ರುದ್ರಾಕ್ಷಿ, ಡಿ.ಶ್ರೀನಿವಾಸ್, ರಾಚಣ್ಣ ಟೇಲರ್, ರಮೇಶ್ ಖಾನಾಪುರ, ವೆಂಕಟೇಶ್ ಜಾಲಹಳ್ಳಿ , ಮರಿಯಪ್ಪ ರಾಯಚೂಕರ್, ಉಮಾಪತಿಗೌಡ ನಗರಗುಂಡ ಇತರರಿದ್ದರು.