ರಾಯಚೂರು ಜಿಲ್ಲಾ ಉತ್ಸವ ಆಚರಿಸಲು ವಿನೋದರೆಡ್ಡಿ ಆಗ್ರಹ

ರಾಯಚೂರು,ಜ.೧೯- ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಜಿಲ್ಲಾ ಉತ್ಸವಗಳು ನಡೆಯುತ್ತಿವೆ.ವಿಶೇಷವಾಗಿ ಹಂಪಿ ಉತ್ಸವ, ಚಾಲುಕ್ಯ ಉತ್ಸವ,ನವರಸ ಉತ್ಸವ, ಲಕ್ಕುಂಡಿ ಉತ್ಸವ, ಬೀದರ್, ಜಿಲ್ಲಾ ಉತ್ಸವ, ಚಿಕ್ಕಬಳ್ಳಾಪುರ ಉತ್ಸವ ಇತ್ಯಾದಿಗಳು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿರುತ್ತದೆ. ಆದರೆ ನಮ್ಮ ರಾಯಚೂರು ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಜಿಲ್ಲಾ ಉತ್ಸವವನ್ನು ಮಾಡದೇ ಇರುವುದು ವಿಷಾದನೀಯ ಸಂಗತಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ವಿನೋದರೆಡ್ಡಿ ಹೇಳಿದರು.
ರಾಯಚೂರು ಜಿಲ್ಲೆ ಆರ್ಥಿಕವಾಗಿ ಹಿಂದುಳಿದೆ ಎಂಬುದನ್ನು ಹೊರತುಪಡಿಸಿದರೆ, ನೈಸರ್ಗಿಕವಾಗಿ, ಐತಿಹಾಸಿಕವಾಗಿ, ಸಾಹಿತ್ಯ-ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಜಿಲ್ಲೆಯಾಗಿದೆ ಎಂಬುದು ಇತಿಹಾಸದಲ್ಲಿ ದಾಖಲಾತಿದೆ. ನಮ್ಮ ಇತಿಹಾಸವನ್ನು ಸಾರುವ ಕೋಟೆ ಕೊತ್ತಲಗಳು, ದೇವಸ್ಥಾನಗಳು, ಹಬ್ಬ ಹರಿದಿನಗಳ ಆಚರಣೆಯಲ್ಲಿ ತುಂಬಾ ವಿಶಿಷ್ಟತೆಯನ್ನು ಹೊಂದಿವೆ. ಇಲ್ಲಿನ ಸಾಹಿತ್ಯ, ಸಂಗೀತ, ನೃತ್ಯ, ಜನಪದ ಮತ್ತು ಬಯಲಾಟಗಳು ನಿರಂತರವಾಗಿ ನಡೆಯುತ್ತಾ ರಾಜ್ಯದಲ್ಲೆಲ್ಲಾ ಹೆಸರು ಮಾಡಿವೆ. ಅನೇಕ ಕಲಾವಿದರು ರಾಜ್ಯ-ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.ಇವೆಲ್ಲವನ್ನೂ ನಮ್ಮ ಉತ್ಸವದಲ್ಲಿ ಏರ್ಪಾಡು ಮಾಡುವುದರ ಮೂಲಕ ಜನರಲ್ಲಿ ಮತ್ತೆ ಮತ್ತೆ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಅನಾವರಣಗೊಳಿಸಬೇಕಾಗಿರುತ್ತದೆ. ಇದಕ್ಕೆ ಉತ್ಸವ ವೇದಿಕೆಯಾಗುತ್ತದೆ.
ಉತ್ಸವಗಳು ನಮ್ಮ ಇತಿಹಾಸದ ಸಾಂಸ್ಕೃತಿಕ ಕೊಡುಗೆಯಾಗಿವೆ. ಕಾಕತೀಯ ಅರಸರು, ವಿಜಯನಗರದ ಅರಸರು ಮುಂತಾದ ಅರಸು ಮನೆತನಗಳು ಉತ್ಸವಗಳ ಪರಂಪರೆಯನ್ನು ನಡೆಸಿರುವುದು ಇತಿಹಾಸದಲ್ಲಿ ನಾವು ನೋಡಬಹುದಾಗಿದೆ.
ಜನರಲ್ಲಿ ನಾಡಿನ ಬಗ್ಗೆ ಹೆಮ್ಮೆ ಪಡುವಂತಹ ವಾತಾವರಣವನ್ನು, ಕಲಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉತ್ಸವಗಳು ಪ್ರತಿ ವರ್ಷ ನಡೆಸಬೇಕಾದ ಅವಶ್ಯಕತೆ ಇರುತ್ತದೆ. ಸರ್ಕಾರವು ಇದಕ್ಕೆ ಪೂರಕ ಅನುಮತಿ ಮತ್ತು ಅನುದಾನವನ್ನು ನೀಡುತ್ತಾ ಬಂದಿದೆ. ಇಂತಹ ಉತ್ಸವಗಳಿಗೆ ಸ್ಥಳೀಯ ಜನಪ್ರತಿಗಳ ಸಹಕಾರವೂ ಸೇರಿ ಉತ್ಸವವನ್ನು ಯಶಸ್ವಿಯಾಗಿ ನಡೆಸಲಾಗುತ್ತದೆ.
ತುಶಾರ್ ಗಿರಿನಾಥರವರು ಜಿಲ್ಲಾಧಿಕಾರಿಗಳಾಗಿದ್ದಾಗ (೨೦೦೬-೦೭) ಜಿಲ್ಲಾ ಉತ್ಸವವನ್ನು ಅತ್ಯಂತ ವಿಜೃಂಭಣೆಯನ್ನು ಮಾಡಲಾಗಿತ್ತು. ಮತ್ತೆ ಅಲ್ಲಿಂದ ಇಲ್ಲಿಯವರೆಗೂ ಉತ್ಸವಗಳನ್ನು ಮಾಡಿರುವುದಿಲ್ಲ.ಕಾರಣ ಜಿಲ್ಲಾಧಿಕಾರಿಗಳು ಈ ಬಗ್ಗೆ ಜಿಲ್ಲಾ ಮಟ್ಟದ ಜನಪ್ರತಿನಿಧಿಗಳ, ಅಧಿಕಾರಿಗಳ, ಸಾಹಿತ್ಯ ಸಂಸ್ಕೃತಿಯ ಕಲಾವಿದರುಗಳ ಸಭೆಯನ್ನು ಮಾಡಿ ಶೀಘ್ರವೇ ಜಿಲ್ಲಾ ಉತ್ಸವವನ್ನು ಏರ್ಪಡಿಸಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.