ರಾಯಚೂರು,ಯಾದಗಿರಿಗೆ ಆಸ್ಪತ್ರೆ ಮಂಜೂರಾತಿಗೆ ಒತ್ತಾಯ

ರಾಯಚೂರು,ಮೇ.೩೧-ಹಿಂದುಳಿದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಆರೋಗ್ಯ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಕುಡಿಯುವ ನೀರು, ಹದಗೆಟ್ಟ ವಾತಾವರಣದಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಜನರ ಆರೋಗ್ಯದ ದೃಷ್ಠಿಯಿಂದ ಜಿಲ್ಲೆಗೆ ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಮತ್ತು ತಾಯಿ ಮಕ್ಕಳ ಆಸ್ಪತ್ರೆ ಮಂಜೂರು ಮಾಡಬೇಕೆಂದು ಎಪಿಎಂಸಿ ಮಾಜಿ ಉಪಾಧ್ಯಕ್ಷರು ಮತ್ತು ರೈಲ್ವೆ ಬೋರ್ಡ್ ಸದಸ್ಯರಾದ ಬಾಬುರಾವ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಇಲ್ಲಿನ ಆರೋಗ್ಯ ಸಮಸ್ಯೆಯ ಸೂಚ್ಯಂಕ ನೋಡಿದರೆ ಎಲ್ಲ ಜಿಲ್ಲೆಗಿಂತ ಹೆಚ್ಚಿದೆ. ಉಸಿರಾಟದ ತೊಂದರೆ, ಕ್ಯಾನ್ಸರ್, ಹೃದಯರೋಗ ಮತ್ತು ಕಿಡ್ನಿ ರೋಗದ ಸಮಸ್ಯೆಗಳು ಮತ್ತು ಅಪೌಷ್ಟಿಕತೆ ಇಲ್ಲಿನ ಜನಕ್ಕೆ ಕಾಡುತ್ತಿವೆ. ಗರ್ಭಿಣಿ, ಬಾಣಂತಿ ಮತ್ತು ಹುಟ್ಟುವ ಮಕ್ಕಳಲ್ಲೂ ಆರೋಗ್ಯದ ಸಮಸ್ಯೆ ಇದೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಶಿಶುಗಳ ಅಕಾಲಿಕ ಸಾವಾಗುತ್ತಿವೆ. ಚಿಕಿತ್ಸೆಗಾಗಿ ಪಕ್ಕದ ರಾಜ್ಯ ಹೈದರಾಬಾದ್ ಮತ್ತು ಬೆಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇದೆ.
ಆದ್ದರಿಂದ ರಾಯಚೂರು ಮತ್ತು ಯಾದಗಿರಿಗೆ ಈ ಆಸ್ಪತ್ರೆಗಳ ಅವಶ್ಯಕತೆ ಇದೆ. ಈ ಮೂರು ಆಸ್ಪತ್ರೆಗಳ ಮಂಜೂರಾತಿ ಸಿಕ್ಕರೆ, ಜಿಲ್ಲೆಗೆ ಆರೋಗ್ಯ ಭಾಗ್ಯವೇ ಸಿಕ್ಕಂತಾಗುತ್ತದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇತ್ತ ಕಡೆ ಗಮನಹರಿಸಬೇಕಾಗಿ ಬಾಬುರಾವ್ ವಿನಂತಿಸಿಕೊಂಡಿದ್ದಾರೆ.