ರಾಯಚೂರುಗೆ ಏಮ್ಸ್ ಸಂಸ್ಥೆ ಮಂಜೂರು ಮಾಡುವಂತೆ ಒತ್ತಾಯ

ದೇವದುರ್ಗ,ಜು.೦೪-
ಕಲ್ಯಾಣ ಕರ್ನಾಟಕದಲ್ಲೆ ಅತ್ಯಂತ ಹಿಂದುಳಿದ ರಾಯಚೂರು ಜಿಲ್ಲೆಗೆ ಏಮ್ಸ್ ಸಂಸ್ಥೆ ಮಂಜೂರು ಮಾಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಮನವಿ ಪತ್ರವನ್ನು ಪಟ್ಟಣದ ಮಿನಿವಿಧಾನಸೌಧದಲ್ಲಿ ತಹಸೀಲ್ದಾರ್ ಕೆ.ವೈ.ಬಿದರಿಗೆ ಹಡಪದ ಅಪ್ಪಣ್ಣ ಸಂಘದ ಮುಖಂಡರು ಮನವಿ ಸಲ್ಲಿಸಿದರು.
ರಾಯಚೂರು ಜಿಲ್ಲೆ ಸಂಪನ್ಮೂಲದಲ್ಲಿ ಶ್ರೀಮಂತವಾಗಿದ್ದರೂ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದೆ. ರಾಯಚೂರಿಗೆ ಹೆಚ್ಚಿನ ಪ್ರಾತಿನಿತ್ಯ ನೀಡಬೇಕು ಎಂದು ಡಾ.ನಂಜುಂಡಪ್ಪ ವರದಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದರೆ, ಆಡಳಿತ ನಡೆಸಿದ ಸರ್ಕಾರಗಳು ಈ ಜಿಲ್ಲೆಯನ್ನು ಕಡೆಗಣಿಸಿವೆ. ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆ ಸ್ಥಾಪನೆಯಿಂದ ಈ ಭಾಗದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಾಧ್ಯವಿದೆ.
ಡಾ.ನಂಜುಂಡಪ್ಪ ವರದಿ ಕೂಡ ಇದನ್ನೇ ಹೇಳಿದ್ದು, ಈ ಹಿಂದೆ ಕೇಂದ್ರ ಸರ್ಕಾರ ಮಂಜೂರು ಮಾಡಿದ ಐಐಟಿಯನ್ನು ರಾಜಕೀಯ ಶಕ್ತಿ ಬಳಸಿ ಧಾರವಾಡ ಜಿಲ್ಲೆಗೆ ಕೊಂಡೊಯ್ದು ಭಾರಿ ಅನ್ಯಾಯ ಮಾಡಲಾಗಿದೆ. ಈಗ ಏಮ್ಸ್ ಸಂಸ್ಥೆ ಮಂಜೂರಾತಿಯಲ್ಲೂ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಏಮ್ಸ್ ಸಂಸ್ಥೆ ಮಂಜೂರು ಮಾಡುವಂತೆ ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಜಾಲಹಳ್ಳಿ, ಮುಖಂಡರಾದ ಚಂದ್ರಶೇಖರ್, ಭೀಮ್‌ರಾಯ, ತಿಮ್ಮಣ್ಣ, ತಿರುಪತಿ, ಶಿವರಾಜ್, ಶರಣಬಸವ, ಉಮೇಶ್, ಶರಣಬಸವ, ದೇವಪ್ಪ, ಶಿವಪ್ಪ, ಬೂದೆಪ್ಪ, ಪ್ರಭು ಹಡಪದ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಇದ್ದರು.