ರಾಯಚೂರಿನಲ್ಲಿಯೇ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲಿ

ರಾಯಚೂರು,ಜ.೨- ರಾಯಚೂರಿನಲ್ಲಿಯೇ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲು ರಾಯಚೂರು ಕಾಟನ್ ಮಿಲ್ಲರ್ ಅಸೋಸಿಯೇಶನ್ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜಿಲ್ಲೆಯ ಎಲ್ಲ ಪಕ್ಷದ ಜನಪ್ರತಿನಿಧಿಗಳು ಒಗ್ಗೂಡಿ ರಾಯಚೂರಿನಲ್ಲಿಯೇ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ ಶ್ರಮ ವಹಿಸಬೇಕು. ಕೇಂದ್ರ ಸರ್ಕಾರವು ಈಗಾಗಲೇ ೭ ಮೆಗಾ ಟೆಕ್ಸ್ ಟೈಲ್ ಪಾರ್ಕ್‌ಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ. ಅವುಗಳಲ್ಲಿ ತಮಿಳು ನಾಡಿನ ವಿರುಥ್ ನಗರ, ತೆಲಂಗಾಣದ ವಾರಂಗಲ್, ಗುಜರಾತ್ ನ ನವಸಾ, ಮಧ್ಯ ಪ್ರದೇಶದ ಧಾರಾ, ಉತ್ತರ ಪ್ರದೇಶದ ಲಖನೌ, ಮಹಾರಾಷ್ಟ್ರದ ಅಮರಾವತಿಯಲ್ಲಿ ಸ್ಥಾಪಿಸಲಾಗಿದೆ. ಈ ೬ ರಾಜ್ಯಗಳ ರಾಜ್ಯಗಳಲ್ಲಿ ಎಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಉತ್ಪನ್ನ ಮಾಡಲಾಗುತ್ತದೆ ಹಾಗೂ ಎಲ್ಲಿ
ಹೆಚ್ಚಿನ ಸಂಖ್ಯೆಯಲ್ಲಿ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಕಾರ್ಖಾನೆಗಳಿವೆಯೋ ಅಂತಹ ಸ್ಥಳಗಳಲ್ಲಿ ಮಾತ್ರ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಮಾಡಲು ಕ್ರಮ ತೆಗೆದುಕೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ (ಕಲಬುರಗಿ) ಸ್ಥಳವನ್ನು ಆಯ್ಕೆ ಮಾಡಿರುವುದು ಬಹಳಷ್ಟು ದುರಂತ. ಕಲಬುರಗಿಯಲ್ಲಿ ಕೇವಲ ೫ ರಿಂದ ೬ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಕಾರ್ಖಾನೆಗಳಿವೆ. ಅಲ್ಲದೇ ಕಡಿಮೆ ಪ್ರಮಾಣದಲ್ಲಿ ಹತ್ತಿ ಬೆಳೆಯನ್ನು ಬೆಳೆಯಲಾಗುತ್ತದೆ. ಹಾಗೂ ಒಂದು ವರ್ಷದಲ್ಲಿ ಕೇವಲ ಎಪ್ಪತ್ತು ಸಾವಿರ ಹತ್ತಿ ಬೇಲ್‌ಗಳನ್ನು ಮಾತ್ರ ತಯಾರಿಸಲಾಗುತ್ತದೆ. ಆದರೆ ರಾಯಚೂರಿನಲ್ಲಿ ೬೫ ಜೆನ್ನಿಂಗ್ ಮತ್ತು ಪ್ರೆಸ್ಸಿಂಗ್ ಕಾರ್ಖಾನೆಗಳಿದ್ದು, ಜಿಲ್ಲೆಯಲ್ಲಿ ೧೧೮ ಫ್ಯಾಕ್ಟರಿಗಳಿರುವುದರಿಂದ ಇಲ್ಲಿನ ಉತ್ಪನ್ನದಿಂದ ರಾಯಚೂರಿನಲ್ಲಿ ೮ ಲಕ್ಷಗಳಿಂದ ೧೦ ಲಕ್ಷಗಳವರೆಗೆ ಹತ್ತಿ ಬೇಲ್‌ಗಳನ್ನು ತಯಾರಿಸಲಾಗುತ್ತಿದೆ. ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಒಟ್ಟು ೧೦ ರಿಂದ ೧೪ ಲಕ್ಷಗಳವರೆಗೆ ಹತ್ತಿ ಬೇಲ್‌ಗಳನ್ನು ತಯಾರಿಸಲಾಗುತ್ತಿದೆ ಆದ್ದರಿಂದ ರಾಯಚೂರಿನಲ್ಲಿಯೇ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲು ಒತ್ತಾಯಿಸಿದರು.