ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ಒತ್ತಾಯ

ದೇವದುರ್ಗ,ಮಾ.೦೧- ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ರಾಯಚೂರು ಜಿಲ್ಲೆಯ ಪ್ರಗತಿಗಾಗಿ ಹಾಗೂ ಇಲ್ಲಿನ ಜನರಿಗೆ ಉತ್ತಮ ಆರೋಗ್ಯ ಮತ್ತು ಉದ್ಯೋಗ ನೀಡಲು ಏಮ್ಸ್ ಸಂಸ್ಥೆ ಮಂಜೂರು ಮಾಡುವಂತೆ ಒತ್ತಾಯಿಸಿ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್‌ಗೆ ತಾಲೂಕು ಕುಂಬಾರ ಸಮುದಾಯ ಸಂಘ ಮನವಿ ಸಲ್ಲಿಸಿತು.
ರಾಯಚೂರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ರಾಜ್ಯದಲ್ಲೆ ಅತ್ಯಂತ ಹಿಂದುಳಿದೆ. ಜಿಲ್ಲೆಯಲ್ಲಿ ಅಪಾರ ನೈಸರ್ಗಿಕ ಸಂಪತ್ತು ಹೊಂದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಕಂಡಿಲ್ಲ. ದೇಶಕ್ಕೆ ಬಂಗಾರ ನೀಡುವ ಏಷ್ಯಾದ ಏಕೈಕ ಹಟ್ಟಿಚಿನ್ನದಗಣಿ, ರಾಜ್ಯಕ್ಕೆ ಬೆಳಕು ನೀಡುವ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಘಟಕಗಳಿವೆ. ಅಲ್ಲದೆ ಏಷ್ಯಾದಲ್ಲಿ ಅತಿಹೆಚ್ಚು ಹತ್ತಿ, ನಂಬರ್ ಒನ್ ಸೋನಾ ಮಸೂರಿ ಬೆಳೆದು ದೇಶದ ಜನರಿಗೆ ಆಹಾರ ಭಾಗ್ಯ ಒದಗಿಸಿದೆ.
ಕೃಷ್ಣಾ ಹಾಗೂ ತುಂಗಭದ್ರಾ ನದಿ ಸಮೃದ್ಧವಾಗಿ ಹರಿಯುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ರೈತರಿಗೆ ನೀರುಸಿಗುತ್ತಿಲ್ಲ. ಇದರಿಂದ ಕೃಷಿಯಿಂದ ಉದ್ಯೋಗ ಅವಕಾಶಗಳು ಕಡಿಮೆಯಾಗಿದ್ದು, ಯುವಕರು, ರೈತರು, ಕೂಲಿಕಾರರು ಗುಳೆ ಹೋಗುತ್ತಿದ್ದಾರೆ. ಏಮ್ಸ್ ಮಂಜೂರು ಮಾಡಿದರೆ ಸ್ಥಳೀಯರಿಗೆ ಉದ್ಯೋಗ ದೊರೆಯುವ ಜತೆಗೆ ಆರೋಗ್ಯ ಸೇವೆ, ಶಿಕ್ಷಣ ವ್ಯವಸ್ಥೆ ಸುಧಾರಣೆ ಕಾಣಲಿದೆ. ಐಐಟಿಯಲ್ಲಿಆದ ಅನ್ಯಾಯ ಸರಿಪಡಿಸಲು ಸರ್ಕಾರ ಏಮ್ಸ್ ಮಂಜೂರು ಮಾಡಬೇಕು. ಇದಕ್ಕಾಗಿ ಏಮ್ಸ್ ಬೇಕಾದ ಅಗತ್ಯ ಸೌಲಭ್ಯ ಜಿಲ್ಲೆಯಲ್ಲಿವೆ.
ಕೂಡಲೇ ರಾಜ್ಯ ಸರ್ಕಾರ ಜಿಲ್ಲೆಗೆ ಏಮ್ಸ್ ಮಂಜೂರುಮಾಡಿ ಸಚಿವ ಸಂಪುಟದಲ್ಲಿ ಅನುಮೋಧನೆ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಚಂದ್ರಶೇಖರ ಕುಂಬಾರ, ಮುಖಂಡರಾದ ಅಮರೇಶ ಕುಂಬಾರ, ವಿಜಯಕುಮಾರ್, ಮಲ್ಲಿಕಾರ್ಜುನ್, ವಿಶಾಲ್ ಕುಮಾರ್, ಚೆನ್ನಪ್ಪ ಕುಂಬಾರ, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಇತರರಿದ್ದರು.