ರಾಮ ಹುಟ್ಟಿದ ನಾಡಲ್ಲಿ ಸ್ತ್ರೀಗೆ ರಕ್ಷಣೆಯಿಲ್ಲ

ಬೆಂಗಳೂರು, ಮಾ. ೩೦: ರಾಮನ ಹುಟ್ಟಿದಂತಹ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲಾ, ಸಿ.ಡಿ. ವಿಚಾರದಲ್ಲಿ ಮಹಿಳೆಗೆ ಸರ್ಕಾರದಿಂದ ರಕ್ಷಣೆ ಇಲ್ಲ,ರಮೇಶ್ ಜಾರಕಿಹೊಳಿಯನ್ನು ಬಂದಿಸುವ ಮೂಲಕ ಮಹಿಳೆಗೆ ನ್ಯಾಯ ಕೊಡಿಸಬೇಕೆಂದು ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್ ಒತ್ತಾಯಿಸಿದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಗಣಿ ಎಪಿಸಿ ಸರ್ಕಲ್‌ನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ರವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ರಮೇಶ್ ಜಾರಕಿಹೊಳಿ ವಿರುದ್ದ ಪ್ರತಿಭಟನೆ ನಡೆಸಿ ಆತನನ್ನು ಕೂಡಲೇ ಬಂಧಿಸಬೇಕೆಂದು ಅಗ್ರಹಿಸಿ ಮನವಿ ಮಾಡಿ ಮಾತನಾಡಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಸದಸ್ಯರಾದ ನರೇಂದ್ರಬಾಬು ಮತ್ತು ಅಮೃತ್ ರಾಜ್ ಮಾತನಾಡಿ ಬಿಜೆಪಿ ಮುಖಂಡರು ರಮೇಶ್ ಜಾರಕಿಹೊಳಿ ಅವರ ಮೇಲೆ ಬಂದಿರುವ ಆಪಾದನೆಯನ್ನು ಮುಚ್ಚಿ ಹಾಕುವ ಸಲುವಾಗಿ ಡಿ.ಕೆ.ಶಿವಕುಮಾರ್ ವಿರುದ್ದ ಬೆಳಗಾವಿಯಲ್ಲಿ ಕಾರ್ಯಕರ್ತರನ್ನು ಛೂ ಬಿಟ್ಟು,ಚಪ್ಪಲಿ ಎಸೆದು ಕಲ್ಲು ತೂರಾಟ ನಡೆಸಿ, ರಮೇಶ್ ಬೆಂಬಲಿಗರು ಎಂದು ಪ್ರಚಾರ ಪಡೆಯುತ್ತಿದ್ದಾರೆ. ಅವರು ಬಿಜೆಪಿ ಕಾರ್ಯಕರ್ತರು ಅಲ್ಲವಾ ಎಂದು ಪ್ರಶ್ನಿಸಿದರು.
ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಎಂ.ಬಾಬುರೆಡ್ಡಿ ಮಾತನಾಡಿ ಅಪರಾಧಿ ರಮೇಶ್ ಜಾರಕಿಹೊಳಿ ಎಂದು ಗೊತ್ತಿದ್ದರೂ ಸಹ, ರಕ್ಷಣೆಗೆ ಮುಂದಾಗಿರುವುದು ನಾಚಿಕೆಗೇಡಿನ ವಿಷಯ,ಮುಂದೆ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಏನಾದರೂ ಇಂತಹ ಅಸಭ್ಯ ಪದ ಬಳಸಿದರೆ ನಾವು ಸಹ ತೀವ್ರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಗಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಎಸ್.ಸಿ.ಘಟಕದ ಅಧ್ಯಕ್ಷ ಸಂಪಂಗಿರಾಜು,ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಇಂದಿರಮ್ಮ ನಾಗರಾಜು,ಹೆನ್ನಾಗರ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವರೆಡ್ಡಿ,ಸದಸ್ಯರಾದ ಕಿರಣ್ ಕುಮಾರ್,ನವೀನ್ ಮತ್ತಿತರರು ಭಾಗವಹಿಸಿದ್ದರು.