ರಾಮ ಮಂದಿರ ನಿರ್ಮಾಣದ ಕನಸು ನನಸಾಗಿದೆ:ಸೋಮೇಶ್ವರಾನಂದ ಶ್ರೀಗಳು

ಸೈದಾಪುರ:ಜ.1: ಆಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣ ಮಾಡುವುದು ನಮ್ಮ ಪೂರ್ವಜ್ಜರ ಮತ್ತು ಕೋಟ್ಯಂತರ ಭಕ್ತರ ಶತಮಾನಗಳ ಕನಸು ನನಸಾಗಿದೆ ಎಂದು ಶ್ರೀ ಸಿದ್ದರೂಡ ಸಿದ್ದಚೇತನಾಶ್ರಮದ ಪೀಠಾದಿಪತಿ ಸೋಮೇಶ್ವರಾನಂದ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ವಿಶ್ವನಾಥ ಮಂದಿರದಲ್ಲಿ ವಿಶ್ವ ಹಿಂದು ಪರಿಷದ್ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಅಯೋಧ್ಯೆಯ ಅಕ್ಷತಾ ಕಳಶ ವಿತರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಪ್ರಭು ರಾಮನಲ್ಲಿರುವ ಅತ್ಯುತ್ತಮ ಗುಣಗಳಿಂದಾಗಿ ಅವರನ್ನು ಮರ್ಯಾದ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಅವರಲ್ಲಿದ್ದ ಗುಣಗಳನ್ನು ನಾವು ಅಳವಡಿಸಿಕೊಂಡರೆ ಜೀವನ ಪಾವನವಾಗುವುದು ಎಂದು ಆರ್ಶಿವಚನ ನೀಡಿದರು.
ಅಕ್ಷತಾ ಕಳಶ ವಿತರಣಾ ಅಭಿಯಾನದ ಜಿಲ್ಲಾ ಸಂಯೋಜಕ ಮಲ್ಲರೆಡ್ಡಿ ಪಾಟೀಲ್ ಮಾತನಾಡಿ. ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೇತೃತ್ವದಲ್ಲಿ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ಜ.1ರಿಂದ ಜ.15ರ ತನಕ ದೇಶದಾದ್ಯಂತ ಮನೆ ಮನೆಗೆ ಮಂತ್ರಾಕ್ಷತೆ, ಕರಪತ್ರ ವಿತರಣೆ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ವಿವಿಧ ವಾದ್ಯಗಳ ಮೂಲಕ ವಿಶೇಷ ಶೋಭಯಾತ್ರೆ: ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯ ಗಂಟುಗಳನ್ನು ಪಟ್ಟಣದ ಮಾರೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ವಿವಿಧ ರಸ್ತೆಗಳ ಮೂಲಕ ವಿಶ್ವನಾಥ ಮಂದಿರವರೆಗೆ ವಿವಿಧ ವಾದ್ಯಗಳ ಮೂಲಕ ಭಕ್ತಿ ಪೂರ್ವಕವಾಗಿ ಶೋಭಯಾತ್ರೆ ಜರುಗಿತು. ಇಸ್ಕಾನ್ ತಂಡದ ವಾದ್ಯ ಮತ್ತು ಹಾಡುಗಳು ಶೋಭ ಯಾತ್ರೆಗೆ ವಿಶೇಷ ಮೆರಗು ನೀಡಿತು.
ಈ ವೇಳೆ ವಿಶ್ವ ಹಿಂದು ಪರಿಷದ್ ಜಿಲ್ಲಾ ಉಪಾಧ್ಯಕ್ಷ ಬನದೇಶ್ವರ ವಾರದ್, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜಿಲ್ಲಾ ಕಾರ್ಯವಾಹಕ ಸೂಗಪ್ಪ ಮಂದಲ್, ನೀತಿನ್ ತಿವಾರಿ, ಹೋಬಳಿ ಪ್ರಮುಖ ಚಂದ್ರಕಾಂತ ತೀಮೋಜಿಕರ್, ಭೀಮಣ್ಣ ಮಡಿವಾಳಕರ್, ಪ್ರೇಮನಾಥ ಕದಂಬ, ಕೆಬಿ ಗೋವರ್ಧನ, ಕೆಪಿ ವಸಂತಕುಮಾರ, ರಾಕೇಶ ಕೋರೆ, ಅಂಬರೀಶ ನಾಯಕ್, ರವಿ ಪಾಟೀಲ್, ಲಕ್ಷ್ಮಣ ನಾಯಕ್ ನೀಲಹಳ್ಳಿ, ಕಮಲಾ ಕುಲಕರ್ಣಿ, ಇಸ್ಕಾನ್ ಸದಸ್ಯೆ ಮಧುಶ್ರೀ ಸಿದ್ದಪ್ಪ, ಶ್ರೀದೇವಿ ಪಾಟೀಲ್ ಶೆಟ್ಟಿಹಳ್ಳಿ, ಮಹಾಲಕ್ಷ್ಮೀ ಪಾಟೀಲ್ ಸಂಗವಾರ, ಅಳ್ಳೆಪ್ಪ ಕಿಲ್ಲನಕೇರ, ಅವಿನಾಶ ಮನ್ನೆ, ರಣದೀರ್, ಸಂತೋಷ, ರಾಹುಲ್, ಹಣಮೇಶ ಸೇರಿದಂತೆ ಇತರರಿದ್ದರು.