ರಾಮ ಮಂದಿರ ನಿರ್ಮಾಣಕ್ಕೆ ವಿಹೆಚ್ಪಿ ನಿಧಿ ಸಂಗ್ರಹ

ಹೈದರಾಬಾದ್ ಡಿಸೆಂಬರ್ ೨೪. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ದೇಣಿಗೆ ನೀಡಲು ಮುಂದೆ ಬರುತ್ತಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯಕಾರಣಿ ಸಮಿತಿ ಅಧ್ಯಕ್ಷ ಅಲೋಕ್ ಕುಮಾರ್ ಅವರು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ದೇಶಾದ್ಯಂತ ನಿಧಿ ಸಂಗ್ರಹಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ. ಮಂದಿರ ನಿರ್ಮಾಣದ ಜೊತೆಗೆ ವಸ್ತುಸಂಗ್ರಹಾಲಯ, ಮಾಹಿತಿ ಭಂಡಾರ ಗ್ರಂಥಾಲಯ ಮತ್ತು ಇತರ ನಿರ್ಮಾಣ ಕಾರ್ಯಗಳಿಗಾಗಿ ನಿಧಿಯನ್ನು ಸಂಗ್ರಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ನಿಧಿ ಸಂಗ್ರಹಣೆಗಾಗಿ ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ೪ ಲಕ್ಷಕ್ಕೂ ಹೆಚ್ಚಿನ ಗ್ರಾಮಗಳಿಗೆ ಭೇಟಿ ನೀಡಲಿದೆ ಸುಮಾರು ೧೧ ಕೋಟಿ ಕುಟುಂಬಗಳನ್ನು ಭೇಟಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದರ ಅಂಗವಾಗಿ ತೆಲಂಗಾಣ ರಾಜ್ಯಕ್ಕೆ ಭೇಟಿ ನೀಡಿದ್ದು ಸುಮಾರು ೯೦೦೦ ಗ್ರಾಮಗಳಿಗೆ ಹಾಗೂ ಮೂರು ಕೋಟಿಗೂ ಅಧಿಕಾರಿಗಳನ್ನು ಭೇಟಿಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ನಮ್ಮ ನಿರೀಕ್ಷೆಗೆ ಮೀರಿ ಜನರು ಈಗಾಗಲೇ ದೇಣಿಗೆ ನೀಡಲು ಮುಂದೆ ಬರುತ್ತಿದ್ದಾರೆ. ನೂರ ಎಂಟು ಎಕರೆ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣ ಮತ್ತಿತರ ಕಾರ್ಯಗಳಿಗೆ ಈ ಹಣವನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಸರ್ಕಾರ ನೀಡಬಹುದಾದ ಹಣವನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಸರ್ಕಾರದ ಹಣವನ್ನು ಮಂದಿರ ನಿರ್ಮಾಣ ಮತ್ತಿತರ ಕಾರ್ಯಗಳಿಗೆ ಬಳಕೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬರುವ ಜನವರಿ ೨೦ರಿಂದ ಫೆಬ್ರುವರಿ ಹತ್ತರವರೆಗೆ ನಿಧಿ ಸಂಗ್ರಹ ಕಾರ್ಯ ನಡೆಯಲಿದೆ ಅವರು ತಿಳಿಸಿದ್ದಾರೆ.