ರಾಮೇಶ್ವರಂ ಕೆಫೆ ಪುನಾರಂಭ: ಬಿಗಿ ಭದ್ರತೆ

ಬೆಂಗಳೂರು,ಮಾ.೮-ಬಾಂಬ್ ಸ್ಫೋಟ ಸಂಭವಿಸಿದ ಒಂದು ವಾರದ ಬಳಿಕ ಮಹಾ ಶಿವರಾತ್ರಿ ದಿನವೇ ವೈಟ್‌ಫೀಲ್ಡ್ ಬಳಿಯ ಬ್ರೂಕ್ ಫೀಲ್ಡ್ ನಲ್ಲಿನ ರಾಮೇಶ್ವರಂ ಕೆಫೆ ಇಂದು ಬೆಳಗ್ಗೆಯಿಂದ ಮತ್ತೆ ಆರಂಭಗೊಂಡಿದೆ.
ಕೆಫೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದ ಬಳಿಕ ಗ್ರಾಹಕರಿಗೆ ಕೆಫೆಯನ್ನು ಮುಕ್ತಗೊಳಿಸಲಾಗಿದ್ದು,ಬೆಳಗ್ಗೆಯಿಂದ ಕಡಿಮೆ ಪ್ರಮಾಣದಲ್ಲಿದ್ದ ಗ್ರಾಹಕರು ಮಧ್ಯಾಹ್ನದ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ಇಷ್ಟದ ತಿನಿಸುಗಳನ್ನು ಸವಿದರು.
ಬಾಂಬ್ ಸ್ಫೋಟವನ್ನು ಗಂಭೀರವಾಗಿ ಪರಿಗಣಿಸಿರುವ ರಾಮೇಶ್ವರಂ ಕೆಫೆಯಲ್ಲಿ ಹೆಚ್ಚಿನ, ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಫೆಯ ಪ್ರವೇಶ ದ್ವಾರದ ಬಳಿ ೨ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ.
ನಾಳೆಯಿಂದ ಪ್ರತಿ ಗ್ರಾಹಕರನ್ನು ಹ್ಯಾಂಡ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಿಯೇ ಒಳ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಕೆಫೆ ಸುತ್ತ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಈ ಮಧ್ಯೆ, ಪೊಲೀಸ್ ಪಹರೆಯಲ್ಲೇ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ೧ರಂದು ಶುಕ್ರವಾರ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ೮ ಮಂದಿ ಗಾಯಗೊಂಡಿದ್ದರು. ಬಾಂಬ್ ಇಟ್ಟು ಹೋಗಿದ್ದ ಬಾಂಬರ್ ಶೋಧ ಕಾರ್ಯ ಮುಂದುವರಿದಿದೆ.
ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ ನಗರದ ಇತರ ಹೋಟೆಲ್‌ಗಳಲ್ಲಿಯೂ ಭದ್ರತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲು ಹೋಟೆಲ್ ಸಂಘ ಚಿಂತನೆ ನಡೆಸಿತ್ತು. ಮೆಟಲ್ ಡಿಟೆಕ್ಟರ್ಗಳ ಅಳವಡಿಕೆ, ಗ್ರಾಹಕರಿಗೆ ಬ್ಯಾಗುಗಳನ್ನು ಹೊರಗೆ ಬಿಟ್ಟು ಬರುವಂತೆ ಸೂಚನೆ ನೀಡುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹೋಟೆಲ್ ಸಂಘದ ಸಭೆಯಲ್ಲಿ ಸಮಲೋಚನೆ ನಡೆಸಲಾಗಿತ್ತು. ಇದೀಗ ರಾಮೇಶ್ವರಂ ಕೆಫೆ ಮಾತ್ರ ಪುನರಾರಂಭದ ವೇಳೆ ಮೆಟಲ್ ಡಿಟೆಕ್ಟರ್ ಅಳವಡಿಸಿದೆ. ಭದ್ರತಾ ತಪಾಸಣೆಯ್ನೂ ಆರಂಭಿಸಿದೆ.