ರಾಮುಲು ಪಿ.ಎ. ಸೆರೆ ಜಟಾಪಟಿಗೆ ಎಡೆ

ಬೆಂಗಳೂರು,ಜು.೨- ಸಚಿವ ಶ್ರೀರಾಮಲು ಅವರ ಆಪ್ತ ಸಹಾಯಕನ ಬಂಧನ ವಿಚಾರ ರಾಜಕೀಯ ಜಟಾಪಟಿಗೆ ಎಡೆಯಾಗಿದ್ದು, ಸಿಟ್ಟಿಗೆದ್ದಿರುವ ಶ್ರೀರಾಮುಲುರವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಮಾಡಿ ಅಸಮಾಧಾನ ಹೊರಹಾಕಿದ್ದಾರೆ.
ನನ್ನ ಆಪ್ತ ಸಹಾಯಕ ತಪ್ಪು ಮಾಡಿದ್ದರೆ, ನನ್ನ ಗಮನಕ್ಕೆ ತರಬೇಕಾಗಿತ್ತು. ನನಗೆ ಏನನ್ನೂ ತಿಳಿಸದೆ ದೂರು ನೀಡಿರುವ ವಿಜಯೇಂದ್ರರವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಿಧಾನಸೌಧದ ಅವರ ಕಚೇರಿಯಲ್ಲಿ ಭೇಟಿ ಮಾಡಿದ್ದ ಸಚಿವ ಶ್ರೀರಾಮುಲು ಅವರು, ತಮ್ಮ ಆಪ್ತ ಸಹಾಯಕನ ವಿರುದ್ಧ ದೂರು ನೀಡುವ ಮೊದಲು ತಮ್ಮನ್ನು ಸಂಪರ್ಕಿಸಲಿಲ್ಲ. ಹೀಗಾದರೆ ಹೇಗೆ. ಇದರಿಂದ ತಮಗೆ ಕೆಟ್ಟ ಹೆಸರು ಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.
ಸಚಿವ ಶ್ರೀರಾಮುಲು ಅವರನ್ನು ಸಮಾಧಾನಪಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಎಲ್ಲವನ್ನೂ ಸರಿಪಡಿಸೋಣ ಬೇಸರ ಬೇಡ. ಈಗ ಸಭೆ ಇದೆ. ಮಧ್ಯಾಹ್ನದ ನಂತರ ಈ ಬಗ್ಗೆ ಕುಳಿತು ಮಾತನಾಡೋಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಳಿದರು ಎನ್ನಲಾಗಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮುಲುರವರ ಆಪ್ತ ಸಹಾಯಕ ರಾಜು ವಿರುದ್ಧ ಬಿ.ವೈ. ವಿಜಯೇಂದ್ರ ದೂರು ನೀಡಿದ್ದು, ದೂರನ್ನಾಧರಿಸಿ ಸಿಸಿಬಿ
ಪೊಲೀಸರು ನಿನ್ನೆ ಸಚಿವ ಶ್ರೀರಾಮುಲು ಅವರ ಅಧಿಕೃತ ನಿವಾಸದಲ್ಲೇ ಅವರ ಆಪ್ತ ಸಹಾಯಕ ರಾಜುರವರನ್ನು ಬಂಧಿಸಿ ಕರೆದೊಯ್ದಿದ್ದರು.
ನನಗೆ ಗೊತ್ತಿಲ್ಲ: ಶ್ರೀರಾಮುಲು
ತಮಗೆ ಮಾಹಿತಿ ನೀಡದೆ ತಮ್ಮ ಆಪ್ತ ಸಹಾಯಕನನ್ನು ಬಂಧಿಸಿದ್ದು, ಶ್ರೀರಾಮುಲುರವರ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಪರೋಕ್ಷವಾಗಿ ಬಿ.ವೈ. ವಿಜಯೇಂದ್ರ ಅವರ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜು ತಮ್ಮ ಪಿಎ ಅಲ್ಲ. ನನ್ನ ಜತೆ ಕೆಲಸ ಮಾಡಿಕೊಂಡಿದ್ದ ಹುಡುಗ. ಈತನ ವಿರುದ್ಧ ದೂರು ನೀಡಿರುವುದು ತಮಗೆ ಗೊತ್ತೇ ಇಲ್ಲ. ತಮಗೆ ತಿಳಿಸಿ ವಿಜಯೇಂದ್ರ ಅವರು ದೂರು ನೀಡಿದ್ದರೆ ಎಲ್ಲವನ್ನೂ ಸರಿಪಡಿಸುತ್ತಿದ್ದೆ. ಎಲ್ಲೋ ಮಿಸ್ ಕಮ್ಯುನಿಕೇಷನ್ ಆಗಿದೆ ಎಂದರು.
ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತದೆ ಎಂಬ ಮಾಧ್ಯಮಗಳ ಪ್ರಶ್ನೆ ಅತ್ಯಂತ ಸಮಂಜಸವಾಗಿದೆ ಎಂದು ಹೇಳುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದರು.
ಎಲ್ಲವನ್ನೂ ಸರಿಪಡಿಸುವ ಕೆಲಸ ಮಾಡುತ್ತೇನೆ, ಎಲ್ಲವು ಕಾನೂನಿನಂತೆ ಆಗಲಿದೆ. ದೂರು ನೀಡುವ ಮೊದಲೇ ವಿಜಯೇಂದ್ರ ತಮಗೆ ಹೇಳಬಹುದಿತ್ತು ಎಂದು ಪುನರುಚ್ಛರಿಸಿದರು.