ರಾಮಾಯಣ ಬದುಕಿಗೆ ದಾರಿದೀಪ-ಕೆಂಪರಾಜು

ಗೌರಿಬಿದನೂರು.ನ೫:ಮಹರ್ಷಿ ವಾಲ್ಮೀಕಿ ರವರು ಸಮಾಜದ ಒಳಿತಿಗಾಗಿ ರಾಮಾಯಣವನ್ನು ರಚಿಸಿ ಜನರ ಬದುಕಿಗೆ ದಾರಿದೀಪವಾಗಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಸರ್ವ ಸಮಾಜದ ಮಹಾಋಷಿಯಾಗಿದ್ದರು ಎಂದು ಜಿ.ಪಂ ಸದಸ್ಯ ಕೆ.ಕೆಂಪರಾಜು ತಿಳಿಸಿದರು.
ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ಬಿ.ಬೊಮ್ಮಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ವಾಲ್ಮೀಕಿ ರವರು ಸಮಾಜದಲ್ಲಿ ಪ್ರತಿಯೊಬ್ಬರ ಬದುಕಿಗೆ ಆಸರೆಯಾಗುವ ಹಾಗೂ ಸಂಸ್ಕಾರಯುತ ನೀತಿ ಹೇಳುವ ಪವಿತ್ರ ಗ್ರಂಥ ಶ್ರೀರಾಮಾಯಣವನ್ನು ವಿಶ್ವಕ್ಕೆ ನೀಡಿದ್ದಾರೆ. ರಾಮಾಯಣದಲ್ಲಿ ಬರುವ ಶ್ರೀರಾಮ ಹಾಗೂ ಶ್ರೀಸೀತಾಮಾತೆಯ ಆದರ್ಶ ಜೀವನದ ಕಥೆಗಳು ಇಂದಿಗೂ ವಿಶ್ವ ಮನ್ನಣೆ ಗಳಿಸಿದೆ. ದಾರ್ಶನಿಕರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗೌರವಿಸುವ ಕೆಲಸವನ್ನು ನಾವೆಲ್ಲ ಮುಂದುವರಿಸಿಕೊಂಡು ಹೋಗಬೇಕಾಗಿರುವುದು ಧರ್ಮವಾಗಿದೆ ಎಂದು ಹೇಳಿದರು.
ಇದೇ ವೇಳೆ ಹೂವು ಮತ್ತು ದೀಪಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಶ್ರೀ ವಾಲ್ಮೀಕಿ ಭಾವಚಿತ್ರವನ್ನು ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕಳಸವನ್ನು ಹೊತ್ತು ಪಲ್ಲಕ್ಲಿಯ ಜತೆಗೆ ಸಾಗಿದರು.
ಗ್ರಾಮದ ಮುಖಂಡರಾದ ಎಸ್.ರಮೇಶ್ ನಾಯಕ್, ರಂಗನಾಥ್ ಗೌಡ, ರಾಮಣ್ಣ, ಎಸ್.ಗಂಗಾಧರಪ್ಪ, ಎಸ್.ಡಿ.ಸತ್ಯನಾರಾಯಣ, ನಂಜುಂಡಪ್ಪ, ಶಿವಣ್ಣ, ಜೆ.ಗಂಗಣ್ಣ, ಶಶಿಕುಮಾರ್, ಚಿಕ್ಕಆದಪ್ಪ, ಮೋಹನ್, ಅಶೋಕ್ ಉಪಸ್ಥಿತರಿದ್ದರು.