ರಾಮಲಿಂಗ ಕಾಮಣ್ಣ ಪ್ರತಿಷ್ಟಾಪನೆ ಸ್ಥಗಿತ

ನವಲಗುಂದ,ಮಾ26: ಮಹಾಮಾರಿ ಕೊರೊನಾ 2ನೇ ಅಲೆ ಪ್ರಭಾವದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಹಾಗೂ ಶಿಷ್ಟಾಚಾರದ ಉಲ್ಲಂಘನೆ ಹಿನ್ನಲೆಯಲ್ಲಿ ಗುರುವಾರ ರಾತ್ರಿ ಪ್ರತಿಷ್ಟಾಪನೆಗೊಳ್ಳಬೇಕಿದ್ದ ಐತಿಹಾಸಿಕ ಪ್ರಸಿದ್ಧಿ ಪಡೆದ ರಾಮಲಿಂಗ ಕಾಮಣ್ಣನ ಪ್ರತಿಷ್ಠಾಪನೆ, 16 ಕಾಮಣ್ಣರ ಪ್ರತಿಷ್ಟಾಪನೆ ಹಾಗೂ ಮೆರವಣಿಗೆ ಸ್ಥಗಿತಗೊಳಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಮಲಿಂಗ ಕಾಮಣ್ಣ ಟ್ರಸ್ಟನ ಅಧ್ಯಕ್ಷ ಲಿಂಗರಾಜ ಶೆಟ್ಟರ್ ಹೇಳಿದರು.
ಗುರುವಾರ ಪಟ್ಟಣದ ರಾಮಲಿಂಗ ಕಾಮಣ್ಣನ ಟ್ರಸ್ಟಕಚೇರಿಯಲ್ಲಿ ಸುದ್ದಿಗೋಷ್ಠಿ ಏರ್ಪಡಿಸಿದ ಅವರು, ಸಮಸ್ತ ನಾಗರಿಕರ, ಹಿರಿಯರ ಹಾಗೂ ಎಲ್ಲ 16 ಬೀದಿ ಕಾಮಣ್ಣರ ಸದಸ್ಯರ ಸಮ್ಮುಖದಲ್ಲಿ ಅಂತಿಮ ನಿಲುವು ತಾಳಲಾಗಿದೆ ಎಂದರು.
ಐತಿಹಾಸಿಕ ಪ್ರಸಿದ್ಧಿಗೆ ಹೆಸರಾದ ಸಿದ್ದಿಪುರುಷ ರಾಮಲಿಂಗ ಕಾಮಣ್ಣನನ್ನು ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿ ಹೋಳಿ ಆಚರಣೆ ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡಿದ್ದೇವು. ಹಿಂದಿನ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲು ನಿರ್ಧರಿಸಲಾಗಿತ್ತು. ಆದರೆ, ಈ ವರ್ಷ ಕೊರೊನಾ 2ನೇ ಅಲೆಯಿಂದಾಗಿ ಭಕ್ತರ, ಸಾರ್ವಜನಿಕರ ಹಿತದೃಷ್ಟಿಯಿಂದ ರಾಮಲಿಂಗ ಕಾಮಣ್ಣ ಪ್ರತಿಷ್ಠಾಪನೆ ರದ್ದುಗೊಳಿಸಿದ್ದೇವೆ ಎಂದರು.
ತಾಲೂಕಾಡಳಿತ, ಜಿಲ್ಲಾಧಿಕಾರಿಗಳ ನಿರ್ದೇಶನಗನುಗುಣವಾಗಿ ಸರಳ, ವಿಧಿ, ವಿಧಿವಿಧಾನಗಳೊಂದಿಗೆ ಆಚರಣೆ ಮಾಡಲು ರಾಮಲಿಂಗ ಕಾಮಣ್ಣ ಪ್ರತಿಷ್ಠಾಪನೆಗೆ ಅನುಮತಿ ನೀಡಿದೆ. ಆದರೆ, ಸಾಂಪ್ರದಾಯಿಕ ಶಿಷ್ಟಾಚಾರದ ಉಲ್ಲಂಘನೆ ಹಿನ್ನಲೆಯಲ್ಲಿ ಪ್ರತಿಷ್ಠಾಪನೆ ಕೈಬಿಟ್ಟಿದ್ದೇವೆ. ಅದಕ್ಕಾಗಿ ಭಕ್ತರು, ಸ್ಥಳೀಯ ನಾಗರಿಕರು, ಸಹಕಾರ ನೀಡಬೇಕು. ಎಲ್ಲ ಕಾಮಣ್ಣರ ಸದಸ್ಯರು, ಹಿರಿಯರ ಒಪ್ಪಂದದ ಮೇರೆಗೆ ತೆಗೆದುಕೊಂಡ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಟ್ರಸ್ಟ್ ಸದಸ್ಯರಾದ ಮಲ್ಲಿಕಾರ್ಜುನ ಜಲಾದಿ, ಯಲ್ಲಪ್ಪ ಭೂಮಿ, ಭರತ್ ಬೋಜನಮಠ, ವೆಂಕಣ್ಣ ಗಾಯಕವಾಡ, ವೀರಪ್ಪ ಪುಗಸೆಟ್ಟಿ, ಟಿಪ್ಪು ನದಾಫ, ಯಲ್ಲಪ್ಪ ಭೋವಿ ಇದ್ದರು.