ರಾಮಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಸಂಸ್ಥೆಯಿಂದ ಆಹಾರ ವ್ಯವಸ್ಥೆ

ಸವದತ್ತಿ,ಮೇ27: ಮಹಾಮಾರಿ ಕೊರೊನಾ ಎರಡನೆ ಅಲೆಗೆ ಜನತೆ ತತ್ತರಿಸಿ ಹೋಗಿದ್ದು, ಕರ್ತವ್ಯ ನಿರತ ಪೊಲೀಸ್ ಮತ್ತು ಗೃಹರಕ್ಷ ದಳದ ಸಿಬ್ಬಂದಿಯವರ ಕಷ್ಟವನ್ನು ಕೇಳುವರಾರು ಎಂಬ ಸ್ಥಿತಿಯಲ್ಲಿರುವಾಗ ಸವದತ್ತಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿ ಸಂಸ್ಥೆಯು ಮುಂದೆ ಬಂದು ಪೊಲೀಸ್ ಮತ್ತು ಗೃಹ ರಕ್ಷಕದಳದ ಸಿಬ್ಬಂದಿಗೆ ಪ್ರತಿ ನಿತ್ಯ ಅಲ್ಪೋಪ ಆಹಾರದ ವ್ಯವಸ್ಥೆಯನ್ನು ಮಾಡುತ್ತಿದೆ.
ಲಾಕ್‍ಡೌನ್ ಸಂದರ್ಭದಲ್ಲಿ ಪ್ರತಿ ದಿನ ಬೆಳಿಗ್ಗೆ ತಮ್ಮ ಕುಟುಂಬವನ್ನು ಬಿಟ್ಟು ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಯವರ ಕಾಳಜಿಯು ಸಂದಿಗ್ದ ಪರಸ್ಥಿತಿಯಲ್ಲಿ ಅತ್ಯವಶ್ಯವಾಗಿದೆ. ಜನರ ರಕ್ಷಣೆ ಮಾಡುವವರಿಗೆ ಕೇವಲ ಅನುಕಂಪ ತೋರದೆ ಅವರಿಗೆ ಮೇ.23ರಿಂದ ಜೂನ್ 7ರವರೆಗೆ ಪ್ರತಿ ದಿನ ಅಲ್ಪೋಪ ಆಹಾರದ ವ್ಯವಸ್ಥೆಯನ್ನು ಮಾಡುತ್ತಿರುವ ಸಂಸ್ಥೆಯ ಸದಸ್ಯರ ಕಾರ್ಯ ಶ್ಲಾಘನೀಯವಾಗಿದೆ.
ಗಿರಿಜನ್ನವರ ಓಣಿಯಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಿತ್ಯ ದಾಸೋಹ ನಡೆಯುತ್ತಿದ್ದು, ಪುರಸಭೆಯವರ ಸಹಕಾರದಿಂದ ದೇವಸ್ಥಾನದ ಆವರಣವನ್ನೆಲ್ಲಾ ಶುಚಿತ್ವಗೊಳಿಸಿ ಸ್ಯಾನಿಟೈಸರ್ ಮಾಡಿ ಇಲ್ಲಿ ದಾಸೋಹವನ್ನು ಪ್ರಾರಂಭಿಸಲಾಗಿದೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ದಾಸೋಹದ ಅಡುಗೆ ಮಾಡುವದರಿಂದ ಹಿಡಿದು ಕೊರೊನಾ ವಾರಿಯರ್ಸಗೆ ಬಡಿಸುವದರ ಮೂಲಕ ಎಲ್ಲ ಸ್ವಚ್ಚತಾ ಕಾರ್ಯವನ್ನು ದೇವಸ್ಥಾನದ ಅಭಿವೃದ್ದಿ ಸಂಸ್ಥೆಯ ಸದಸ್ಯರೆ ಮಾಡುತ್ತಿದ್ದಾರೆ. ಸಂಸ್ಥೆಯ ಸದಸ್ಯ ವಿಠ್ಠಲ ಜಾಮದಾರ ಸಂಗಡಿಗರೊಂದಿಗೆ ದಿನಕ್ಕೊಂದು ಬೇರೆ ಬೇರೆ ತರಹದ ರುಚಿಕಟ್ಟಾದ ಉಪಹಾರ ಮತ್ತು ಕಷಾಯವನ್ನು ತಯಾರಿಸುತ್ತಿದ್ದು, ಉಳಿದ ಸದಸ್ಯರೆಲ್ಲಾ ಸಿಬ್ಬಂದಿಯವರಿಗೆ ವ್ಯವಸ್ಥಿತವಾಗಿ ಉಣಬಡಿಸುವ ಕಾರ್ಯ ಮಾಡುತ್ತಿದ್ದಾರೆ. ಸಂಸ್ಥೆಯ ಅಧ್ಯಕ್ಷ ಪುಂಡಲೀಕ ಭೀಮಪ್ಪ ಬಾಳೋಜಿಯವರ ನೇತೃತ್ವದಲ್ಲಿ ನೆರೆ ಮತ್ತು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಈ ಸಂಸ್ಥೆಯ ಸದಸ್ಯರು ಅನೇಕ ರೂಪದಲ್ಲಿ ಜನೋಪಕಾರಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ಗಮನಾರ್ಹ ವಿಷಯವಾಗಿದೆ.
ಸಂಸ್ಥೆಯ ಅಧ್ಯಕ್ಷ ಪುಂಡಲೀಕ ಭೀ. ಬಾಳೋಜಿ, ಸದಸ್ಯರಾದ ಕೇದಾರ ಮೊಕಾಶಿ, ಅಣ್ಣಪ್ಪ ಪವಾರ, ರವಿ ಗಿರಿಜನ್ನವರ, ವಿಠ್ಠಲ ಜಾಮದಾರ, ಧರ್ಮರಾಜ ಗಿರಿಜನ್ನವರ, ಮಲ್ಲೇಶ ರಾಜನಾಳ, ಮಹೇಶ ಜಾಮದಾರ ಹಾಗೂ ಇತರರು ಪ್ರತಿ ನಿತ್ಯ ಈ ದಾಸೋಹ ಕಾರ್ಯವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.