ರಾಮಲಾಭ ಬಿಜೆಪಿಗೆ ದಕ್ಕಲ್ಲ:ಸಿಎಂ

(ಸಂಜೆವಾಣಿ ಪ್ರತಿನಿಧಿಯಿಂದ)
ಮೈಸೂರು, ಜ. ೨೫- ರಾಮಮಂದಿರದಿಂದ ಬಿಜೆಪಿಗೆ ರಾಜಕೀಯ ಲಾಭ ಆಗಲ್ಲ. ರಾಮಮಂದಿರ ಪೂರ್ಣವಾಗದೆ ಉದ್ಘಾಟನೆ ಮಾಡಲಾಗಿದೆ. ಇದನ್ನೆಲ್ಲಾ ಜನ ಗಮನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಅನುಕೂಲ ಆಗುತ್ತದೆ ಎಂದು ಬಿಜೆಪಿಯವರು ಆತುರಾತುರವಾಗಿ ರಾಮಮಂದಿರ ಉದ್ಘಾಟನೆ ಮಾಡಿದ್ದಾರೆ. ರಾಮಮಂದಿರ ಪೂರ್ಣವಾಗಿ ನಿರ್ಮಾಣವಾಗಿಲ್ಲ. ರಾಮಮಂದಿರದಿಂದ ರಾಜಕೀಯ ಲಾಭ ಆಗುತ್ತದೆ ಎನ್ನುವುದು ಸಾಧ್ಯವಿಲ್ಲ ಎಂದರು.
ನಮ್ಮ ದೇಶದ ಜನ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದಾರೆ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಹಿಂದುಳಿದ ವರ್ಗಗಳ ಆಯೋಗ ಜಾತಿ ಗಣತಿ ವರದಿ ಸಲ್ಲಿಕೆಗೆ ಸಿದ್ಧತೆ ನಡೆಸಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ವರದಿ ಕೊಡುವುದಕ್ಕೂ ಅವರು ಸಮಯ ಕೇಳಿಲ್ಲ. ಕೇಳಿದರೆ ಸಮಯ ಕೊಡುತ್ತೇನೆ ವರದಿಯನ್ನೂ ಪಡೆಯುತ್ತೇನೆ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಅದರ ಬಗ್ಗೆ ಈ ಬಗ್ಗೆ ಮಾತನಾಡುವುದು ಸರಿಯಲ್ಲ. ವರದಿ ಕೊಟ್ಟ ನಂತರ ವರದಿಯನ್ನು ಪರಿಶೀಲಿಸಿ ತೀರ್ಮಾನ ಮಾಡಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಮರಳುತ್ತಾರೆ ಎಂಬ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನನಗೆ ಅವಮಾನವಾಗಿರುವ ಪಕ್ಷಕ್ಕೆ ಮತ್ತೆ ಹೋಗಲ್ಲ ಎಂದು ಶೆಟ್ಟರ್ ಅವರೇ ಹೇಳಿದ್ದಾರೆ. ಅವರ ಹೇಳಿಕೆಯಲ್ಲೇ ಉತ್ತರ ಇದೆ. ಯಾರು ಎಷ್ಟೇ ಪ್ರಯತ್ನ ಮಾಡಿದರೂ ಶೆಟ್ಟರ್ ಬಿಜೆಪಿಗೆ ಹೋಗಲ್ಲ ಎಂಬ ವಿಶ್ವಾಸವನ್ನು ಸಿದ್ಧರಾಮಯ್ಯ ವ್ಯಕ್ತಪಡಿಸಿದರು.
ಒಂದು ದೇಶ ಒಂದು ಚುನಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಪ್ರಾಯೋಗಿಕವಾಗಿ ಸಾಧ್ಯನಾ ಎಂಬುದನ್ನು ನೋಡಬೇಕಾಗುತ್ತದೆ. ಇದು ಸಂವಿಧಾನದ ಪರವಾಗಿರುತ್ತದಾ ಎಂಬುದು ಮುಖ್ಯ. ಸಂವಿಧಾನ ರಕ್ಷಣೆಯಾದರೆ ಒಳ್ಳೆಯದು. ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಆಗುತ್ತಿದೆ. ಕೆಲವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ಇದನ್ನೆಲ್ಲಾ ಯುವಕರು ಗಮನಿಸಬೇಕಾಗುತ್ತದೆ ಎಂದು ಸಿದ್ಧರಾಮಯ್ಯ ಹೇಳಿದರು.
ಭಾರತ್ ಜೋಡೊ ಪಾದಯಾತ್ರೆ ಸಂದರ್ಭದಲ್ಲಿ ಅಸ್ಸಾಂನಲ್ಲಿ ನಡದೆ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಸಂಸದ ರಾಹುಲ್‌ಗಾಂಧಿ ಅವರ ಮೇಲೆ ಎಫ್‌ಐಆರ್ ಹಾಕಿರುವುದು ತಪ್ಪು. ಪಾದಯಾತ್ರೆಯನ್ನು ತಡೆಯಲು ಈ ರೀತಿಯ ಕುತಂತ್ರಗಳನ್ನು ನಡೆಸಿದ್ದಾರೆ. ಇದಕ್ಕೆಲ್ಲಾ ರಾಹುಲ್‌ಗಾಂಧಿ ಕೇರ್ ಮಾಡಲ್ಲ. ಉದ್ದೇಶಪೂರ್ವಕವಾಗಿ ಎಫ್‌ಐಆರ್ ದಾಖಲು ಮಾಡಿರುವುದನ್ನು ಖಂಡಿಸುತ್ತೇನೆ ಎಂದರು.
ನಿಗಮ ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷರ ಪಟ್ಟಿ ಹೈಕಮಾಂಡ್‌ನ ಬಳಿ ಇದೆ. ಹೈಕಮಾಂಡ್ ಒಪ್ಪಿಗೆ ನೀಡಿದ ನಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.